ಬೆಂಗಳೂರು: ರೈತರು, ಕಾಂಗ್ರೆಸ್‌ನ ತೀವ್ರ ಪ್ರತಿರೋಧದಿಂದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದ್ದ ಮೂರು ಕೃಷಿ ಕಾಯ್ದೆಗಳ ಅನ್ವಯವೇ, ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ.
ಕೃಷಿ ಬೆಲೆ ಆಯೋಗಕ್ಕೆ ನೇಮಕ ಮಾಡಲಾದ ಅಧ್ಯಕ್ಷ ಮತ್ತು ಸದಸ್ಯರಿಗೆ ಷರತ್ತು-ನಿಬಂಧನೆ ಮತ್ತು ಕರ್ತವ್ಯಗಳನ್ನು ನಿಗದಿ ಮಾಡಿ 2024ರ ಡಿಸೆಂಬರ್ 24ರಂದು ರಾಜ್ಯ ಕೃಷಿ ಇಲಾಖೆ ಹೊರಡಿಸಿದ ಆದೇಶದಲ್ಲಿ ಈ ಉಲ್ಲೇಖವಿದೆ.
ಕೇಂದ್ರ ಸರ್ಕಾರದ ಮೂರು ಕಾಯ್ದೆಗಳು ಮತ್ತು ಅದರ ಆಧಾರದಲ್ಲಿ 2020ರ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಆಧಾರವಾಗಿರಿಸಿಕೊಳ್ಳುವಂತೆ ತಿಳಿಸಿದೆ.
ರೈತರ ಆದಾಯ ಹೆಚ್ಚಿಸಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯ ಅಧ್ಯಯನ ನಡಸಿ’ ಎಂದೂ ಹೇಳಿದೆ.
2020ರಲ್ಲಿ ಕೇಂದ್ರ ಸರ್ಕಾರವು ರೈತ ಉತ್ಪನ್ನ ಮತ್ತು ವಾಣಿಜ್ಯ ಉತ್ತೇಜನ ಹಾಗೂ ಸೌಲಭ್ಯಗಳ ಕಾಯ್ದೆ-2020, ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ರಕ್ಷಣೆ ಕಾಯ್ದೆ-2020 ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020ಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿತ್ತು. ರಾಜ್ಯದ ಆಗಿನ ಬಿಜೆಪಿ ಸರ್ಕಾರವು ಎಪಿಎಂಸಿಗಳ ಹೊರಗೂ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ಮಾಡಿಕೊಡಲು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು.
ಈ ಎಲ್ಲಾ ತಿದ್ದುಪಡಿಗಳು ರೈತರಿಗೆ ಮಾರಕ ಮತ್ತು ಇವುಗಳ ಹಿಂದೆ ಕಾರ್ಪೊರೇಟ್ ಲಾಬಿ ಇದೆ ಎಂದು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. 2023ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಮಂಡಿಸಿದ್ದ ಪ್ರಣಾಳಿಕೆಯಲ್ಲೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಘೋಷಿಸಿತ್ತು.
ರೈತರು ದೆಹಲಿ ಗಡಿಯಲ್ಲಿ ಈ ಕಾಯ್ದೆಗಳ ವಿರುದ್ಧ ನಡೆಸಿದ ಹೋರಾಟದ ಫಲವಾಗಿ 2021ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು, ಅವುಗಳನ್ನು ವಾಪಸ್ ಪಡೆಯಿತು. ಆದರೆ ಅವುಗಳ ಆಧಾರದಲ್ಲಿ ರಾಜ್ಯದಲ್ಲಿ 2020ರಲ್ಲಿ ಜಾರಿಗೆ ತರಲಾದ ಎಪಿಎಂಸಿ ತಿದ್ದುಪಡಿ ಕಾಯ್ದೆ ಇನ್ನೂ ಜಾರಿಯಲ್ಲಿದೆ.
2023ರ ಜುಲೈ 27ರಂದು ಕೃಷಿ ಬೆಲೆ ಆಯೋಗದ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಿ ಕಾಂಗ್ರೆಸ್ ಸರ್ಕಾರವು ಆದೇಶ ಹೊಡಿಸಿತ್ತು. ಆಗಲೇ ಮೇಲಿನ ಕಾಯ್ದೆಗಳಡಿಯಲ್ಲಿ ಶಿಫಾರಸು ನೀಡಿ ಎಂದು ಸೂಚಿಸಿತ್ತು. 2024ರ ಡಿಸೆಂಬರ್‌ನಲ್ಲಿ ಹೊರಡಿಸಲಾದ ಆದೇಶದಲ್ಲೂ ಯಥಾವತ್ ಸೂಚನೆಗಳನ್ನು ಕಾಯ್ದುಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಈ ನಡೆಗೆ ರಾಜ್ಯದ ರೈತರ ಹಕ್ಕುಗಳ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

