ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ತಳವಾರಕೇರಿಯ ಅಣ್ಣಪ್ಪ, ಬಾಣದಕೇರಿಯ ಶ್ರೀಕಾಂತ ಹಾಗೂ ಹಳೆಮಲಪನಗುಡಿಯ ಮೌಲಾ ಹುಸೇನ್ ತಪ್ಪು ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶ ಡಿ.ಪಿ. ಕುಮಾರಸ್ವಾಮಿ ಆದೇಶ ನೀಡಿದ್ದಾರೆ. ಆರೋಪಿಗಳಿಗೆ ₹58 ಸಾವಿರ ದಂಡ ವಿಧಿಸಲಾಗಿದ್ದು, ಅದರಲ್ಲಿ ₹30 ಸಾವಿರವನ್ನು ಗಾಯಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ಗೆ ನೀಡಲು ಮತ್ತು ಉಳಿದ ₹28 ಸಾವಿರವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ. ಘಟನೆ 2020ರ ಮಾರ್ಚ್ 14ರ ಮಧ್ಯರಾತ್ರಿ ನಡೆದಿದೆ. ನಗರ ಮುಖ್ಯ ಮಸೀದಿಯ ಮುಂದೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮತ್ತಣ್ಣ ಅವರಿಗೆ ಬೈಕ್‌ನಲ್ಲಿ ಬಂದ ಆರೋಪಿಗಳು ಕೇಕೆ ಹಾಕುತ್ತ ಸೈಲೆನ್ಸರ್ ಶಬ್ದ ಮಾಡುತ್ತ ಬಂದಿದ್ದರು. ಬುದ್ಧಿವಾದ ಹೇಳಿದಕ್ಕೆ ಕೋಪಗೊಂಡು, ಅಣ್ಣಪ್ಪ ಬೈಕ್ ಅನ್ನು ಪೊಲೀಸ್ ಮೇಲೆ ಹತ್ತಿಸಲು ಯತ್ನಿಸಿದ್ದು, ಇತರಿಬ್ಬರು ಕಲ್ಲಿನಿಂದ ಮುಖಕ್ಕೆ ಗಂಭೀರ ಗಾಯಗೊಳಿಸಿದ್ದರು. ಇನ್‌ಸ್ಪೆಕ್ಟರ್ ಪ್ರಸಾದ್ ಕೆ. ಗೋಖಲೆ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಟಿ. ಅಂಬಣ್ಣ ವಾದ ಮಂಡಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

