Breaking News

ಹುಬ್ಬಳ್ಳಿಯಲ್ಲಿ ಘೋರ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಅರೆಸ್ಟ್

ನಗರದಲ್ಲಿ ಅಸಹಾಯಕ ಮಹಿಳೆಯೊಬ್ಬಳ ಮೇಲೆ ಇಬ್ಬರು ನರಾಧಮರು ಸಾಮೂಹಿಕ ಅತ್ಯಾಚಾರ ಎಸಗಿ, ಆ ವಿಕೃತ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ 9ರಂದು ನಗರದ ಅಂಬೇಡ್ಕರ್ ಮೈದಾನದ ಸಮೀಪ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದ ಆರೋಪಿಗಳು, ಮದ್ಯಪಾನ ಮಾಡಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಈ ಘೋರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿವಶಂಕರ ಕಾಲೋನಿಯ ನಿವಾಸಿಗಳಾದ ಶಿವಾನಂದ್ (29) ಹಾಗೂ ಗಣೇಶ್ ಗಿಡ್ಡಣ್ಣವರ (31) ಎಂದು ಗುರುತಿಸಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆ ಶಿವಮೊಗ್ಗ ಮೂಲದವರಾಗಿದ್ದು, ಗಂಡನೊಂದಿಗೆ ಉಂಟಾದ ಗೃಹ ಕಲಹದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹುಬ್ಬಳ್ಳಿಗೆ ಬಂದಿದ್ದಳು. ಆಕೆಯ ಪತಿ ಪ್ರಕರಣವೊಂದರಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ಮಹಿಳೆ ಸಿದ್ದಾರೂಢ ಮಠದ ಪ್ರಸಾದ ಸೇವಿಸಿ ನಗರದಲ್ಲಿ ಅಲೆದಾಡುತ್ತಿದ್ದುದನ್ನು ಗಮನಿಸಿದ ಆರೋಪಿಗಳು, ಆಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅತ್ಯಾಚಾರ ಮಾಡುವ ಸಂದರ್ಭದಲ್ಲೇ ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿಷಯ ತಿಳಿದ ಸ್ಥಳೀಯರು ಆರೋಪಿಗಳನ್ನು ಪತ್ತೆಹಚ್ಚಿ ಸ್ಥಳದಲ್ಲೇ ಧರ್ಮದೇಟು ನೀಡಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತ ಮಹಿಳೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು, “ನಗರದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಅತ್ಯಂತ ಆತಂಕಕಾರಿ. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Share News

About Shaikh BigTv

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *