ಬೆಂಗಳೂರಿನ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಮಾರ್ಚ್ 8ರಂದು ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪನಾಯಕನಹಳ್ಳಿ ನಿವಾಸಿ ತಿಲಕ್(23) ಅಲಿಯಾಸ್ ಗುಡ್ಡೆ ಎಂಬಾತನ ತಲೆ ಮೇಲೆ ಇಟ್ಟಿಗೆ ಹಾಕಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಕೆಂಪನಾಯಕನಹಳ್ಳಿ ವಾಸಿ ಅಜಯ್ ಕುಮಾರ್(25), ರವಿಚಂದ್ರ ನಾಯಕ್ ಅಲಿಯಾಸ್ ಪಾಯಿಸನ್ ರವಿ (24), ಸಂಜಯ್ ಅಲಿಯಾಸ್ ನಾಯಿಬಾಬಾ(26) ಮತ್ತು ಮೊಹಮ್ಮದ್ ರಜಾಕ್(24) ಎಂಬವರನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಆರೋಪಿಗಳು ತಿಲಕ್ನ ಕೊಂದಿರೋದಾಗಿ ತಿಳಿದುಬಂದಿದೆ. ಬನ್ನೇರುಘಟ್ಟ ಗೊಲ್ಲಹಳ್ಳಿ ಗುಟ್ಟೆ ಮೈದಾನ ಬಳಿ ಕೊಲೆ ನಡೆದಿದ್ದು, ಪ್ರಮುಖ ಆರೋಪಿ ಅಜಯ್ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಖಾಕಿಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಕಾಡಿನಲ್ಲಿ ವಾಸಿಸುತ್ತಿದ್ದ ಕೃತ್ಯ ನಡೆದ ದಿನ ಊಟ ತರಲು ಈತ ತಿಲಕ್ಗೆ ಹೇಳಿದ್ದ. ಆದರೆ ತಿಲಕ್ ಪ್ರೇಯಸಿ ಭೇಟಿಗಾಗಿ ತೆರಳಿದ್ದು, ಆಕ್ರೋಶಗೊಂಡ ಅಜಯ್ ತಿಲಕ್ ಬರುತ್ತಿದ್ದಂತೆ ಆವಾಜ್ ಹಾಕಿದ್ದಾನೆ. ತನಗಿಂತ ಹುಡುಗಿ ಹೆಚ್ಚಾ ಎಂದು ಈತ ಪ್ರಶ್ನಿಸಿದ ಹಿನ್ನೆಲೆ ವಾಗ್ವಾದ ನಡೆದಿದೆ. ಹೀಗಾಗಿ ತನ್ನ ವಿರುದ್ಧವೇ ಮಾತನಾಡುತ್ತೀಯಾ ಎಂದು ರೊಚ್ಚಿಗೆದ್ದು ತಿಲಕ್ ಮೇಲೆ ದಾಳಿ ನಡೆಸಿರೋದು ತನಿಖೆ ವೇಳೆ ಬಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

