ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಸಿಟಿ ಸ್ಟ್ರೀಟ್ ಕ್ರಾಸ್‌ನ ಬೆಟ್ಟಪ್ಪ ಲೇಔಟ್‌ನ ಚಿನ್ನಾಭರಣ ಅಂಗಡಿಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ನರೇಂದ್ರ (19) ಹಾಗೂ ಕುಲದೀಪ್ (23) ಬಂಧಿತರು. ನಗರ್ತಪೇಟೆಯ ಕುಂಬಾರಪೇಟೆ ಮುಖ್ಯರಸ್ತೆಯ ಕಿಶನ್ ಬಿಷ್ಣೋಯಿ ನೀಡಿದ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹35 ಲಕ್ಷ ಮೌಲ್ಯದ 10 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಕಿಶನ್ ಬಿಷ್ಣೋಯಿ ಅವರ ಅಂಗಡಿಗೆ ಒಂದು ತಿಂಗಳ ಹಿಂದೆ ಆರೋಪಿಗಳು ಕೆಲಸಕ್ಕೆ ಸೇರಿಕೊಂಡಿದ್ದರು. ಇಬ್ಬರನ್ನೂ ಪಾಲಿಶಿಂಗ್ ಕೆಲಸಕ್ಕೆಂದು ಮಾಲೀಕರು ನಿಯೋಜಿಸಿದ್ದರು. ಜನವರಿ 29ರಂದು ಕಿಶನ್ ಅವರು ಅಂಗಡಿಯಲ್ಲಿ ಕಾರ್ಮಿಕರನ್ನು ಬಿಟ್ಟು ಹೊರಗೆ ಹೋಗಿದ್ದರು. ಆಗ 12 ಕೆ.ಜಿ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿಕೊಂಡು ಆರೋಪಿಗಳು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು. ‘ಕೃತ್ಯ ಎಸಗಿದ ಬಳಿಕ ಆರೋಪಿಗಳು ರಾಜಸ್ಥಾನಕ್ಕೆ ತೆರಳಿದ್ದರು. ಸೆಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿಗೆ ತೆರಳಿದ ಪೊಲೀಸ್ ತಂಡವು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಮೂಲಗಳು ತಿಳಿಸಿವೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

