ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಇಬ್ಬರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪದಡಿ ಕಬ್ಬಲಿಗ ಸಮುದಾಯದ ಐವರ ವಿರುದ್ಧ ಗುರುಮಠಕಲ್ ಠಾಣೆಯಲ್ಲಿ ಶನಿವಾರ ತಡರಾತ್ರಿ ಪ್ರಕರಣ ದಾಖಲಾಗಿದೆ. ಗಾಯಾಳು ಅನಿಲ್‌ಕುಮಾರ್ ಅವರು ನೀಡಿದ ದೂರಿನ ಅನ್ವಯ ಯಂಪಾಡದ ಅನಂತಪ್ಪ ಪೆದ್ದಿ, ಲಕ್ಷ್ಮಣ ಕಾಳಪ್ಪ ಪೆದ್ದಿ, ರಮೇಶ ಪೂಜಾರಿ, ಸಣ್ಣ ಲಕ್ಷ್ಮಣ ಪೆದ್ದಿ, ಅಂಜಪ್ಪ ಪೆದ್ದಿ ಸೇರಿ ಇತರರ ವಿರುದ್ಧ ಹಲ್ಲೆ, ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಜವಳ ಕಾರ್ಯಕ್ರಮದ ವೇಳೆ ಹನುಮಾನ್ ದೇಗುಲ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದಕ್ಕೆ ಅನಿಲ್‌ಕುಮಾರ್ ಮತ್ತು ಸಿದ್ದಲಿಂಗಪ್ಪ ಮೇಲೆ ಆರೋಪಿಗಳು ಹಲ್ಲೆ ಮಾಡಿದ ಆರೋಪವಿದೆ. ಭಾನುವಾರ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆಹಾಕಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಡಿವೈಎಸ್‌ಪಿ ಸುರೇಶ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

