ಕೊಳ್ಳೇಗಾಲ: ತಾಲ್ಲೂಕಿನ ತೇರಂಬಳ್ಳಿ ಹಾಗೂ ಗೊಬ್ಬಳಿಪುರ ಗ್ರಾಮದ ಬಳಿ ಪ್ಯಾಸೆಂಜರ್ ಆಟೊದಲ್ಲಿ ಅಕ್ರಮವಾಗಿ 11 ಮೂಟೆಯಲ್ಲಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಇಂಡವಾಳು ಗ್ರಾಮದ ಅಶೋಕ ಎಂಬಾತನನ್ನು ಅಗರ ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 512 ಕೆ.ಜಿ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಈತನು ಸರ್ಕಾರ ಜನರಿಗೆ ನೀಡಿರುವ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಆಟೊದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಗರ ಮಾಂಬಳ್ಳಿ ಪೊಲೀಸರು ಮತ್ತು ಆಹಾರ ನಿರೀಕ್ಷಕರು ತೇರಂಬಳ್ಳಿ-ಗೊಬ್ಬಳಿಪುರ ರಸ್ತೆಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಿದ್ದಾರೆ. ದಾಳಿಯಲ್ಲಿ ಆಹಾರ ನಿರೀಕ್ಷಕ ಎನ್.ಎಂ ಪ್ರಸಾದ್, ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಸ್‌ಐ ಕರಿಬಸಪ್ಪ, ಎಚ್.ಸಿ ಪರಶಿವಮೂರ್ತಿ, ಸಿಬ್ಬಂದಿ ಶಿವಕುಮಾರ್, ಉಸ್ಮಾನ್ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

