Breaking News

ಆಸ್ಪತ್ರೆಯಲ್ಲಿ ರೋಗಿಯ 10 ಲಕ್ಷ ಮೌಲ್ಯದ ಚಿನ್ನ ಕದ್ದ ಮಹಿಳಾ ಸಿಬ್ಬಂದಿ

ಬೆಂಗಳೂರು: ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಚಿನ್ನಾಭರಣ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 1ರಂದು ಆಸ್ಪತ್ರೆಗೆ ದಾಖಲಾಗಿದ್ದ ಸ್ವಪ್ನಾ ಎಂಬ ರೋಗಿಯ 9.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಸ್ವಪ್ನಾ ಪತಿ ಶ್ರೀನಿವಾಸ್ ಎಂಬುವರು ನೀಡಿದ ದೂರಿನ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಯಲಹಂಕ ನಿವಾಸಿ ಶ್ರೀನಿವಾಸ್‌, ಮೇ 1ರಂದು ಶಸ್ತ್ರಚಿಕಿತ್ಸೆಗಾಗಿ ತಮ್ಮ ಪತ್ನಿ ಸ್ವಪ್ನಾರನ್ನು ಹೆಣ್ಣೂರು ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 2ರ ಮುಂಜಾನೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮೊದಲು ನರ್ಸಿಂಗ್ ಸಿಬ್ಬಂದಿ ಎಲ್ಲಾ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಬಳಿಕ ಮಹಿಳೆ 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ತೂಕದ ಕಿವಿಯೋಲೆಗಳು ಹಾಗೂ 10 ಗ್ರಾಂ ತೂಕದ ಬೆಳ್ಳಿ ಕಾಲುಗಜ್ಜೆಗಳನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನೊಳಗೆ ಇರಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಮಧ್ಯಾಹ್ನ ಸುಮಾರು 2.45ಕ್ಕೆ ಕಪಾಟು ಪರಿಶೀಲಿಸಿದಾಗ ಆಭರಣಗಳು ಕಾಣೆ ಆಗಿತ್ತು. ಈ ಸಂಬಂಧ ಆಸ್ಪತ್ರೆಯ ಸಿಬ್ಬಂದಿ ವಿಚಾರಿಸಿದಾಗ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಶ್ರೀನಿವಾಸ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಸಿ ಕ್ಯಾಮೆರಾ ಹಾಗೂ ಇತರೆ ಮಾಹಿತಿ ಆಧರಿಸಿ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ ಮಹಿಳೆಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆಕೆ ಕಳವು ಚಿನ್ನಾಭರಣಗಳನ್ನು ಬೇರೆಡೆ ಅಡಮಾನ ಇರಿಸಿರುವುದು ಗೊತ್ತಾಗಿದೆ. ಅವುಗಳ ವಶಕ್ಕೆ ಪಡೆಯುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *