ಭಟ್ಕಳ: ಚಪ್ಪೆಕಲ್ಲು ತೆಗೆಯಲು ಹೋದ 8 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಭಾನುವಾರ ನಡೆದಿದೆ. ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯವರಾದ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34), ಮಾಲತಿ ನಾಯ್ಕ (38), ಮಾಸ್ತಮ್ಮ ನಾಯ್ಕ ಮೃತರು. ಅಳ್ವೆಕೋಡಿಯಲ್ಲಿ ಇವರೆಲ್ಲರ ಮೃತ ದೇಹ ಪತ್ತೆಯಾಗಿದೆ. ‘ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದವರು ಪರಸ್ಪರ ಕೈ ಹಿಡಿದು ಸಾಗುತ್ತಿದ್ದರು. ತಡರಾತ್ರಿ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಜೊತೆಗೆ ಸಮುದ್ರದ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿ, ಮುಳುಗಿರುವ ಶಂಕೆ ಇದೆ. ಘಟನೆಯಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬುವವರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರು ಕಣ್ಮರೆಯಗಿರುವ ಶಂಕೆ ಇದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ’ ಎಂದು ಭಟ್ಕಳ ಠಾಣೆ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

