ಬೀದರ್: ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು 11.775 ಕೆಜಿ ಗಾಂಜಾ ಜಪ್ತಿ ಮಾಡಿ, ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ. ತಾಲ್ಲೂಕಿನ ಮರ್ಜಾಪುರ (ಟಿ) ಗ್ರಾಮದ ಅರಣ್ಯ ಪ್ರದೇಶದ ಹತ್ತಿರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ₹5.88 ಲಕ್ಷ ಮೌಲ್ಯದ 11.775 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಇನ್ನಿತರೆ ಐವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ಗೋಣಿ ಚೀಲದೊಳಗೆ ಇತರೆ ವಸ್ತುಗಳನ್ನು ತುಂಬಿ, ಅದರ ನಡುವಿನಲ್ಲಿ ಗಾಂಜಾ ಇಟ್ಟು ಸಾಗಿಸುತ್ತಿದ್ದರು. ಈ ಕುರಿತು ವಿಚಾರಿಸಿದಾಗ ಚೀಲದಲ್ಲಿ ಬೀಜಗಳಿವೆ ಎಂದು ತಿಳಿಸಿದ್ದಾರೆ. ಚೀಲ ಬಿಚ್ಚಿ ಪರಿಶೀಲಿಸಿದಾಗ, ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಠಾಣೆ ಪಿಐ ಮಹೇಶ ಗೌಡ ಪಾಟೀಲ್, ಎಎಸ್‌ಐ ಸೂರ್ಯಕಾಂತ, ಕಾನ್‌ಸ್ಟೆಬಲ್‌ಗಳಾದ ಸಿದ್ದಯ್ಯ, ಶ್ರೀನಿವಾಸ, ಬೀದರ್ ಡಿಎಸ್ಬಿ ಘಟಕದ ಸಂತೋಷ್, ಸಂತೋಷ್ ಮಹಾರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

