ಬೆಂಗಳೂರು ಜೆಪಿ ನಗರದಲ್ಲಿ ರೌಡಿಶೀಟರ್ ರಾಜು ಅಲಿಯಾಸ್ ಹಲ್ಮುರ್ಕ ರಾಜು ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಅಕ್ಷತಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಇದ್ದ ಸ್ಥಳವನ್ನು ಹಂತಕರಿಗೆ ತೋರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಪ್ರಮುಖ ಆರೋಪಿ ಬ್ಯಾಟ್ ಸಂತು ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಅಕ್ಷತಾ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. 10 ವರ್ಷಗಳ ಹಿಂದಿನ ದ್ವೇಷ ಹಾಗೂ ಹಿಂದಿನ ಕೊಲೆ ಪ್ರಕರಣಗಳ ವೈಷಮ್ಯವೇ ಈ ಹತ್ಯೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಜೂನ್ 27ರಂದು ನಡೆದ ಈ ಕೃತ್ಯದಲ್ಲಿ ನಡುರಸ್ತೆಯಲ್ಲೇ ರಾಜುವನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಘಟನೆಯ ವೇಳೆ ಮಗು ಹಿಡಿದು ಸಾಗುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಓಡಿ ಹೋಗಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

