ಬೆಂಗಳೂರು ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಜಿನ ಜೀವನಕ್ಕಾಗಿ ಮಾಡಿಕೊಂಡಿದ್ದ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಹತ್ಯೆಗೈದು, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟಿದ್ದ ಭೀಕರ ಘಟನೆ ಬೆಳಕಿಗೆ ಬಂದಿದೆ. ಚಲ್ಲಘಟ್ಟ ನಿವಾಸಿ ಜಯಮ್ಮ ಅವರು ಜುಲೈ 15ರಂದು ನಾಪತ್ತೆಯಾಗಿದ್ದು, ಜುಲೈ 21ರಂದು ರಾಮೋಹಳ್ಳಿ ಕೆರೆಯಲ್ಲಿ ಅವರ ಶವ ಪತ್ತೆಯಾಗಿತ್ತು. ತನಿಖೆಯಲ್ಲಿ ಆರೋಪಿ ಗಗನ್ ಸಾಲದ ಒತ್ತಡದಿಂದ ಜಯಮ್ಮ ಅವರನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ, ಅವರ ಚಿನ್ನದ ಕಿವಿಯೋಲೆ ಮತ್ತು ಉಂಗುರ ದೋಚಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ, ರಾತ್ರಿಯಿಡೀ ಮನೆಯ ಮಂಚದ ಕೆಳಗೆ ಇಟ್ಟು ಮಲಗಿದ್ದ ಎನ್ನಲಾಗಿದೆ. ಮರುದಿನ ಪೋಷಕರು ಮನೆಯಿಂದ ಹೊರಹೋದ ಬಳಿಕ, ಶವವಿದ್ದ ಸೂಟ್‌ಕೇಸ್ ಅನ್ನು ಸ್ಕೂಟರ್‌ನಲ್ಲಿ ಸುಮಾರು 8 ಕಿ.ಮೀ. ದೂರದ ರಾಮೋಹಳ್ಳಿ ಕೆರೆಗೆ ಎಸೆದಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಕುಂಬಳಗೋಡು ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

