ಬೆಂಗಳೂರು ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಕೌಟುಂಬಿಕ ಕಲಹದ ಪ್ರಕರಣದ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಉಮೇರಾ ಜಾಫರ್ ಅವರು ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ, ಮಹಿಳೆಯ ಕುಟುಂಬದ ಸದಸ್ಯರೊಂದಿಗೆ ಜುನೈದ್ ಅಹಮದ್ ಅವರ ಮನೆಗೆ ತೆರಳಿ ಶೋಧ ನಡೆಸಿದ್ದಾರೆ. ಈ ವೇಳೆ ಸುಮಾರು 137 ಗ್ರಾಂ ಚಿನ್ನಾಭರಣ, ₹5 ಲಕ್ಷ ನಗದು, ಕೈಗಡಿಯಾರಗಳು, ಮೊಬೈಲ್‌ಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಮನೆ ಹಾಗೂ ವಾಹನಗಳಿಗೂ ಹಾನಿ ಮಾಡಲಾಗಿದೆ ಎನ್ನಲಾಗಿದೆ. ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಉಮೇರಾ ಜಾಫರ್, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆರೋಪಗಳ ಕುರಿತು ತನಿಖೆ ನಡೆಯಬೇಕಿದ್ದು, ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ನಿರೀಕ್ಷೆಯಲ್ಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

