ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ತಮಕೂರು ಜಿಲ್ಲೆಯ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಹಳಿಲ್ ಗದ್ದೆ ನಿವಾಸಿಗಳಾದ ಜ್ಞಾನೇಶ್(28), ಮೋಹನ್(30) ಮತ್ತು ಗುರುಕಿರಣ್(28) ಮೃತಪಟ್ಟವರು. ಪ್ರೇಮಕುಮಾರ್ ಮತ್ತು ಹೃತಿಕ್ ಗಾಯಗೊಂಡಿದ್ದಾರೆ. ಒಂದೇ ಊರಿನ ಯುವಕರು ಧರ್ಮಸ್ಥಳಕ್ಕೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊರಟಿದ್ದರು. ಬೆಳಗಿನ ಜಾವ ಕೊಟ್ಟಿಗೆಹಾರ ಬಳಿ ಬಂದಾಗ ಚಾಲಕ ನಿದ್ರೆಯಲ್ಲಿ ಇದ್ದಿದ್ದರಿಂದ ಎಡಭಾಗದ ಬಾಕ್ಸ್ ಚರಂಡಿಗೆ ಕಾರು ಗುದ್ದಿದೆ. ನಂತರ ರಸ್ತೆ ಬದಿ ನಿಂತಿದ್ದ ಸಿಲಿಂಡರ್ ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಶಬ್ದ ಕೇಳಿ ಸ್ಥಳೀಯರು ಬಂದು ಕಾರಿನಲ್ಲಿ ಸಿಲುಕಿದ್ದವರನ್ನು ಹೊರಕ್ಕೆ ತೆಗೆದಿದ್ದಾರೆ. ಅಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹಾಸನ ಆಸ್ಪತ್ರೆಗೆ ರವಾನಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

