ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2021ರ ಆಗಸ್ಟ್ 1ರಂದು ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆಗೆ ತೆರಳಿದ್ದ ಬಾಲಕಿಯನ್ನು ಅಮೀರ್ ಲಾಲ್‌ಸಾಬ್ ಜಮಾದಾರ್ ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯಿಸಿದ್ದ. ಬಾಲಕಿ ನಿರಾಕರಿಸಿ ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೋಪಗೊಂಡ ಆರೋಪಿ, ಮಟನ್ ಕತ್ತರಿಸುವ ಚಾಕುವಿನಿಂದ ಎದೆ, ಬೆನ್ನು ಹಾಗೂ ಕೈಗೆ ಇರಿದು ಕೊಲೆ ಮಾಡಿದ್ದ. ಬಳಿಕ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದ ಆತನನ್ನು ಪೊಲೀಸರು ಮರುದಿನ ಬಂಧಿಸಿದ್ದರು. ಪ್ರಕರಣದ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಧೀಶ ವಿಜಯಕುಮಾರ್ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದ್ದಾರೆ. ತೀರ್ಪಿನಿಂದ ಮೃತ ಬಾಲಕಿಯ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

