ಚಿಕ್ಕಮಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್‌ಐ ನಿವೇದಿತಾ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಕೆಫೆ ನಡೆಸುತ್ತಿದ್ದ ಆಕೆ, ಗ್ರಾಹಕರಿಗೆ ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಂಡು ವಂಚನೆ ಮಾಡುತ್ತಿದ್ದಳು ಎನ್ನಲಾಗಿದೆ. ಪೊಲೀಸ್ ಅಧಿಕಾರಿಯಂತೆ ಕಾಣಲು ವಿಶೇಷವಾಗಿ ವೇಷ ಧರಿಸುತ್ತಿದ್ದ ನಿವೇದಿತಾ, ಪರಿಚಯವಾದವರ ಐಷಾರಾಮಿ ಕಾರುಗಳನ್ನು ಪಡೆದು ಮತ್ತೊಬ್ಬರಿಗೆ ಮಾರಾಟ ಮಾಡುವುದು ಸೇರಿದಂತೆ ಹಲವು ರೀತಿಯಲ್ಲಿ ವಂಚಿಸಿದ್ದಾಳೆ ಎನ್ನಲಾಗಿದೆ. 20ಕ್ಕೂ ಹೆಚ್ಚು ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಬಸವನಹಳ್ಳಿ ಹಾಗೂ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ವಂಚಿಸಿದ ಹಣ ಹಾಗೂ ಚಿನ್ನಾಭರಣವನ್ನು ತನ್ನ ಪ್ರಿಯಕರ ದೇವುಗೆ ನೀಡಿರುವುದಾಗಿ ನಿವೇದಿತಾ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೊಬೈಲ್‌ನಲ್ಲಿ ವಿವಿಧ ಹೆಸರುಗಳ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ದೇವುಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

