ಹುಬ್ಬಳ್ಳಿ: ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹು – ಧಾ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನೃತ್ಯ ಸಂಸ್ಥೆಯ ಯಶಸ್ವಿ 16 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಾನಪದ ಪರಂಪರಾ ಉತ್ಸವ -2019 ಕಾರ್ಯಕ್ರಮವನ್ನು ಇದೇ ಜೂ. 30 ರಂದು ಸಂಜೆ 6 ಕ್ಕೆ ನಗರದ ಜಗದ್ಗುರು ಮೂರು ಸಾವಿರ ಮಠದ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ನೃತ್ಯ ನಿರ್ದೇಶಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಚನ್ನಯ್ಯಾ ವಸ್ತ್ರದ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ರುದ್ರಾಕ್ಷಿ ಮಠದ ಬಸವಲಿಂಗ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಶಾಸಕರಾದ ಪ್ರಸಾದ ಅಬ್ಬಯ್ಯ ವಹಿಸಲಿದ್ದಾರೆ. ಹಾಗೂ ಘನ ಉಪಸ್ಥಿತಿಯನ್ನು ಧಾರವಾಡ ವಿಭಾಗದ ಸಹ ಪ್ರಭಾವಿಗಳಾದ ಮಹೇಶ ಟೆಂಗಿನಕಾಯಿ, ಸಿದ್ದಾರೂಢ ಮಠದ ಮಾಜಿ ಚೇರಮನ್ ಮಹೇಂದ್ರ ಸಿಂಘಿ ವಹಿಸಲಿದ್ದಾರೆ ಎಂದ ತಿಳಿಸಿದರು. ಇದರೊಟ್ಟಿಗೆ ಜಾನಪದ ಸಂಸ್ಕೃತಿಯ ಪರಿಚಯಾತ್ಮಕವಾಗಿ ಸ್ವರ್ಣ ಮಯೂರಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಅಂತರಾಷ್ಟ್ರೀಯ ತೊಗಲು ಗೊಂಬೆ ಕಲಾವಿದ ರಾಮಪ್ಪ ಶಿಲ್ಲಿಕ್ಯಾಥರ ಅವರಿಂದ ತೊಗಲು ಗೊಂಬೆ ಆಟ, ಜಾನಪದ ತತ್ವ ಪದಗಳ ಗಾಯಕ ಇಮಾಮಸಾಬ ವಲ್ಲೆಪ್ಪನವರ ಅವರಿಂದ ಜಾನಪದ ಸಂಗೀತ, ಬೇಡರ ವೇಷ ಕಲಾವಿದ ರಾಮಕೃಷ್ಣ ಸುಗಂಧಿ ಅವರ ಬೇಡರ ವೇಷ, ಕ್ರಾಂತಿಕಾರಿ ರೈತ ಗೀತೆಗಳು, ಜಾನಪದ ಸುಗ್ಗಿ ಹಾಡು, ಭರತನಾಟ್ಯ, ತಬಲಾವಾದನ, ಶಹನಾಯಿ ವಾದನ,ಕರಡಿ ಮಜಲು, ಮಹಿಳಾ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಲೋತಿಮಠ, ರಾಧಾಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





