ಹುಬ್ಬಳ್ಳಿ: ಹು- ಧಾ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಹುಬ್ಬಳ್ಳಿಯ ಜನತಾ ಬಜಾರದ ಸೂಪರ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುತ್ತಿರುವ ಚಿಕ್ಕ ವರ್ತಕರಿಗೆ ಯಾವುದೇ ರೀತಿಯ ಸಮರ್ಪಕವಾದ ಮಾಹಿತಿಯನ್ನು ನೀಡದೇ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ. ಅಧಿಕಾರಿ ವರ್ಗದ ಈ ಕ್ರಮವನ್ನುಸೂಪರ್ ಮಾರ್ಕೆಟ್ ಚಿಕ್ಕ ವರ್ತಕರ ಸಂಘದ ವತಿಯಿಂದ ಖಂಡಿಸಲಾಗುವದು ಎಂದು ಸಂಘದ ಅಧ್ಯಕ್ಷರಾದ ಎಮ್.ಎ. ಮುಜಾಹಿದ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆ ವ್ಯವಸ್ಥಾಪಕ ನಿರ್ದೇಶಕರು ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ಅಲ್ಲಿನ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಆರಂಭವಾಗಿದೆ.ಕಳೆದ ಸುಮಾರು ಐದು ದಶಕಗಳಿಂದ ಇಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ತರಕಾರಿ, ಹಣ್ಣು ಹಂಪಲು ಸೇರಿದಂತೆ ಕಿರಾಣಿ ಹಾಗೂ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ಕೂಡಲೇ ಕಾಮಗಾರಿ ನಡೆಸಿದರೆ ವರ್ತಕರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದವರು ಚಿಕ್ಕ ವರ್ತಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಂಡು ನಂತರ ಕಾಮಗಾರಿಗೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.ವ್ಯಾಪಾರಸ್ಥರಿಗೆ ಕಳೆದ 1 ವರ್ಷದಿಂದ ಪಾಲಿಕೆಯಿಂದ ಮಾಸಿಕ ವೇತನ ನೀಡಿಲ್ಲ. ಕೂಡಲೇ ವೇತನ ಪಾವತಿಸಬೇಕು. ಅಲ್ಲದೆ ನೂತನವಾಗಿ ನಿರ್ಮಿಸಲಾಗುತ್ತಿರುವ ವ್ಯಾಪಾರದ ಕಟ್ಟಾಗಳನ್ನು ಈಗಾಗಲೇ ಇರುವ 177 ವ್ಯಾಪಾರಸ್ಥರಿಗೆ ಮೀಸಲಿಡಬೇಕು. ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಕಟ್ಟಡದ ನೀಲ ನಕ್ಷೆಯನ್ನು ಮಾರ್ಪಾಟು ಮಾಡಬೇಕು. ಜೊತೆಗೆ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವವರೆಗೆ ವರ್ತಕರ ವ್ಯಾಪಾರ ಜಾಗೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಪ್ರೇಮನಾಥ ಚಿಕ್ಕತುಂಬಳ, ಉಪಾಧ್ಯಕ್ಷರಾದ ನಾರಾಯಣ ಮುದ್ದಣ್ಣವರ, ರಾಜು ವಾಲ್ಮೀಕಿ, ರಾಘವೇಂದ್ರ ತಾಂಬ್ರೆ, ಹೀರಾಲಾಲ ಬದ್ದಿ, ರಮೇಶ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





