Breaking News

ಪೆಟ್ರೋಲ್ ಗೆ ಪರ್ಯಾಯ ಇಂಧನದ ಆವಿಷ್ಕಾರ ಮಾಡಿದ ಮುರುಘಾ ಮಠದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಇಂಧನದ ದರ ಕೂಡ ಮಿತಿ ಮೀರಿ ಬೆಳೆಯುತ್ತಿದೆ. ಹೀಗೇ ಆದ್ರೆ 2030ರ ವೇಳೆಗೆ ವಾಹನಗಳಿಗೆ ಬಳಸುವ ಪೆಟ್ರೋಲ್, ಡಿಸೇಲ್ ಕೂಡ ಸಿಗದಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಪರ್ಯಾಯ ಇಂಧನದ ಉತ್ಪಾದನೆ ಕಡೆ ಗಮನ ಹರಿಸಿರುವ ಮುರುಘಾ ಮಠಕ್ಕೆ ಸೇರಿದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಕರ್ನಾಟಕ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಸಹಯೋಗದಲ್ಲಿ ಹಲವಾರು ಅವಿಷ್ಕಾರಗಳನ್ನ ಮಾಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ..ಪೆಟ್ರೋಲ್ ಡಿಸೇಲ್‌ನ ಕೊರತೆ, ಮತ್ತು ಅದರಿಂದ ಪರಿಸರದ ಮೇಲಾಗುತ್ತಿರುವ ಅನಾಹುತಗಳನ್ನ ಮನಗಂಡ ಕೋಟೆನಾಡು ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಎಸ್.ಜೆ.ಎಂ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು, ಕರ್ನಾಟಕ ಸರ್ಕಾರದ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಜೊತೆ ಸೇರಿ, ಪರ್ಯಾಯ ಇಂಧನದ ಆವಿಷ್ಕಾರ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಸಿಗುವ ಹೊಂಗೆ, ಬೇವು, ಹಿಪ್ಪೆ, ಶೇಂಗಾ ಸೇರಿದಂತೆ ಎಣ್ಣೆ ಅಂಶಗಳುಳ್ಳ ಬೀಜಗಳ ಮೂಲಕ ಡೀಸೆಲ್ ಉತ್ಪಾದನೆ ಮಾಡುತ್ತಿರುವ ಸಂಸ್ಥೆಯ ಪ್ರಾಧ್ಯಪಕರು ಹಾಗು ವಿದ್ಯಾರ್ಥಿಗಳು, ಬೀಜಗಳನ್ನ ಸಂಸ್ಕರಿಸುವ ನಾಲ್ಕು ಯಂತ್ರಗಳನ್ನ ತಯಾರು ಮಾಡಿದ್ದಾರೆ. ಅವುಗಳಿಂದ ವಾರ್ಷಿಕವಾಗಿ ಈಗಾಗಲೇ 2ಸಾವಿರ ಲೀಟರ್‌ನಷ್ಟು ಡೀಸೆಲ್ ಉತ್ಪಾದನೆ ಮಾಡಲಾಗುತ್ತೊದ್ದು, ಆ ಇಂಧನವನ್ನ ಕಾಲೇಜಿನ ವಾಹನಗಳಿಗೆ ಬಳಸಲಾಗುತ್ತಿದೆ. ಇದರಿಂದ ಪರಸರ ಮಾಲಿನ್ಯ ತಡೆಗಟ್ಟುವ ಜೊತೆಗೆ, ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಇಂಧನದ ಬೇಡಿಕೆಯನ್ನು ಕಡಿಮೆ ಮಾಡಬಹುದಾಗಿದೆ. ಮುಂಬರುವ ದಿನಗಳಲ್ಲಿ ವಿದೇಶಗಳಿಂದ ಬರುವ ಇಂಧನಗಳ ಪೂರೈಕೆ ಸ್ಥಗಿತಗೊಂಡರೇ, ಈ ಜೈವಿಕ ಇಂಧನವನ್ನೇ ಜನರು ಬಳಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರೈತರಲ್ಲಿ ಹೊಂಗೆ, ಬೇವು ಸೇರಿದಂತೆ ಮತ್ತಿತರ ಎಣ್ಣೆ ಅಂಶವಿರುವ ಬೆಳೆಗಳನ್ನ ಬೆಳೆಯಲು ಅರಿವು ಮೂಡಿಸಿದರೆ ನಮ್ಮ ದೇಶದಲ್ಲಿಯೇ ಅಗತ್ಯವಿರುವಷ್ಟು ಇಂಧನವನ್ನು ತಯಾರು ಮಾಡಿಕೊಳ್ಳಬಹುದು ಎಂಬುದು ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ..

ಇನ್ನೂ ಕಳೆದ ಆರು ವರ್ಷಗಳಿಂದ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಜೈವಿಕ ಇಂಧನವನ್ನು ಬಳಸುತ್ತಿರುವ ಬಸ್ಸುಗಳ ಚಾಲಕರು, ಈ ಪರ್ಯಾಯ ಇಂಧನದಿಂದ ವಾಹನಗಳ ಯಂತ್ರಗಳಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ದಟ್ಟವಾದ ಹೊಗೆಯೂ ಬರುವುದಿಲ್ಲ, ಹೀಗಾಗಿ ಪರಿಸರ ಮಾಲಿನ್ಯ ಕಾಪಾಡುವ ಜೊತೆಗೆ, ವಾಹನಗಳ ರಿಪೇರಿ ಖರ್ಚು ಕೂಡ ಉಳಿಯುತ್ತದೆ. ಈ ಇಂಧನ ನಾವು ಬಳಸುತ್ತಿದ್ದ ಡಿಸೇಲ್‌ನಷ್ಟೇ ಸಾಮರ್ಥ್ಯ ಹೊಂದಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಿದರೆ ಡೀಸೆಲ್‌ನಿಂದ ಚಲಾಯಿಸುವ ಎಲ್ಲಾ ಮಾದರಿಯ ವಾಹನಗಳಿಗೆ ಈ ಜೈವಿಕ ಇಂಧನವನ್ನು ಬಳಸಬಹುದು ಎಂದಿದ್ದಾರೆ..

ಒಟ್ಟಾರೆ ಇಂಧನ ದರ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಜೈವಿಕ ಇಂಧನ ಪರ್ಯಾಯ ಇಂಧನವಾಗಿ ಆವಿಷ್ಕಾರಗೊಂಡಿದ್ದರೂ, ಭಾರತ ಸರ್ಕಾರ ಮಾತ್ರ ಇತ್ತ ಗಮನ ಹರಿಸದೇ ಇರೋದ್ರಿಂದ ವಿದ್ಯಾರ್ಥಿಗಳ ಸಂಶೋಧನೆಗೆ ಬೆಲೆ ಸಿಗುತ್ತಿಲ್ಲ, ಇನ್ನಾದರೂ ಕೇಂದ್ರ ಸರ್ಕಾರ ಇತ್ತ ಗಮನ ಹರಿಸಿ, ಜೈವಿಕ ಇಂಧನದ ಉತ್ಪಾದನೆ ಕಡೆ ಹೆಚ್ಚು ಗಮನ ಹರಿಸಿದ್ರೆ, ನಮ್ಮ ದೇಶದಲ್ಲಿಯೇ ಇಂಧನ ಉತ್ಪಾಧಿಸುವ ಜೊತೆಗೆ, ರೈತರು ಸುಲಭವಾಗಿ ಬೆಳೆಯಲು ಸಹಕಾರಿಯಾಗುವ ಎಣ್ಣೆ ಬೀಜಗಳಿಗೆ ಮಾರುಕಟ್ಟೆ ಕಲ್ಪಿಸುವವ ಮೂಲಕ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *