Breaking News

ಮಂಡ್ಯ ಜಿಲ್ಲೆಗೆ ಗೊರೂರು ಜಲಾಶಯದಿಂದ ನೀರು ಹರಿಸಲು ಮನವಿ

ಮಂಡ್ಯ: ಜಿಲ್ಲೆಯ ಗೊರೂರು ಜಲಾಶಯದಿಂದ ಹೇಮಾವತಿ ನದಿಗೆ ನೀರನ್ನು ಹರಿಸಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 30ಸಾವಿರ ಎಕರೆ ಭೂಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗಳನ್ನು ಉಳಿಸಬೇಕು. ಕೆರೆ-ಕಟ್ಟೆಗಳಿಗೆ ನೀರು ಹರಿಸಿ ಪಶುಪಕ್ಷಿಗಳು ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ನೂರಾರು ರೈತಮುಖಂಡರು ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರರ ಕಛೇರಿಗೆ ಮುತ್ತಿಗೆ ಹಾಕಿ ಕಾರ್ಯಪಾಲಕ ಅಭಿಯಂತರ ಬಾಲಕೃಷ್ಣ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ನಿಂಗಪ್ಪ ಅವರಿಗೆ ದಿಗ್ಭಂದನ ವಿಧಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತಸಂಘದ ಹಿರಿಯ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ, ರೈತಮುಖಂಡ ಲಕ್ಷ್ಮೀಪುರ ಜಗಧೀಶ್, ಮುದ್ದುಕುಮಾರ್,ನಾರಾಯಣಸ್ವಾಮಿ, ಚೌಡೇನಹಳ್ಳಿ ಪುಟ್ಟೇಗೌಡ, ಕರೋಠಿ ತಮ್ಮಯ್ಯ, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಬೂಕನಕೆರೆ ನಾಗರಾಜು ಅವರು ಕಾರ್ಯಪಾಲಕ ಎಂಜಿನಿಯರ್ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡು ಕೆ.ಆರ್.ಎಸ್ ಜಲಾಶಯದಿಂದ ನೀರನ್ನು ಹರಿಸಿರುವ ಅಧಿಕಾರಿಗಳು ಹೇಮಾವತಿ ನದಿಅಣೆಕಟ್ಟೆಯಾದ ಗೊರೂರು ಜಲಾಶಯದಿಂದ ಏಕೆ ನೀರನ್ನು ಹರಿಸಲಿಲ್ಲ, ರೈತರಲ್ಲಿಯೇ ತಾರತಮ್ಯ ಮಾಡುತ್ತಿದ್ದೀರ, ಕೆ.ಆರ್.ಪೇಟೆ ತಾಲ್ಲೂಕಿನ ರೈತರನ್ನು ಮಲತಾಯಿ ಮಕ್ಕಳಂತೆ ಕಾಣುತ್ತಿದ್ದೀರ ನಾಳೆ ಸಂಜೆಯೊಳಗೆ ನೀರು ಹರಿಸಬೇಕು. ನದಿ ಅಣೆಕಟ್ಟಿನ ಕಾಲುವೆಗಳು ಹಾಗೂ ಎಡದಂಡೆಯ ನಾಲಾ ಕಾಲುವೆಗೆ ನೀರನ್ನು ಹರಿಸಿ ಒಣಗುತ್ತಿರುವ ಬೆಳೆಗಳನ್ನು ಉಳಿಸಿ ಕುಡಿಯುವ ನೀರನ್ನು ದೊರಕಿಸಿಕೊಡಬೇಕು. ಇಲ್ಲದಿದ್ದರೆ ಹೋರಾಟವನ್ನು ಉಗ್ರಗೊಳಿಸುವ ಜೊತೆಗೆ ಕಾನೂನು ಭಂಗ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಹೇಮಾವತಿ ನದಿಯ ಒಡಲು ಸಂಪೂರ್ಣವಾಗಿ ಬರಿದಾಗಿದೆ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದ್ದರಿಂದ ಕೂಡಲೇ ನದಿಗೆ ಹತ್ತು ದಿನಗಳ ಅವಧಿಗೆ 2ಟಿಎಂಸಿ ನೀರನ್ನು ಹರಿಸಬೇಕು.ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೆ.ಆರ್.ಪೇಟೆಗೆ ಆಗಮಿಸಿ ರೈತರ ಹೋರಾಟಕ್ಕೆ ಧ್ವನಿಯಾಗಿ ಹೇಮಾವತಿ ನದಿ ಕಾಲುವೆಗಳಿಗೆ ನೀರನ್ನು ಹರಿಸಲು ಸಹಾಯ ಮಾಡಬೇಕು ಎಂದು ರೈತಮುಖಂಡ ಲಕ್ಷ್ಮೀಪುರ ಜಗಧೀಶ್ ಮನವಿ ಮಾಡಿದರು. ಪಟ್ಟಣ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

Share News

About admin

Check Also

ಹುಬ್ಬಳ್ಳಿಯಲ್ಲಿ ಮದುವೆ ಆಗದ ನೋವಿಗೆ 35 ವರ್ಷದ ಯುವಕ ಆತ್ಮಹತ್ಯೆ..

ಹುಬ್ಬಳ್ಳಿ: ಮದುವೆಗೆ ಹೆಣ್ಣು ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ …

Leave a Reply

Your email address will not be published. Required fields are marked *