ಬೆಂಗಳೂರು: ಮಾಜಿ ಡಿಸಿಎಂ ಆರ್.ಅಶೋಕ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೋಮನಹಳ್ಳಿಯ ಬಗರ್ ಹುಕ್ಕುಂ ಭೂ ಪ್ರದೇಶವನ್ನು ಅಕ್ರಮ ಮಾಡಿಕೊಂಡಿರುವ ಆರೋಪ ಸಂಬಂಧ ಆರ್.ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ.
ಎಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದು ಮಾಡುವಂತೆ ಕೋರಿ ಆರ್.ಅಶೋಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಎಫ್ ಐಆರ್ ರದ್ದು ಮಾಡಲು ನಿರಾಕರಿಸಿದೆ.
ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗುವುಂತೆ ಕಾಣುತ್ತಿದೆ. ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವುದು ಉತ್ತಮ. ಎಸಿಬಿ ಪ್ರಕರಣದ ತನಿಖೆಯನ್ನ ನಡೆಸಲಿ ಅಂತಾ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೇ ಆರ್.ಅಶೋಕ್ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಿ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಆದೇಶ ಹೊರಡಿಸಿದ್ದಾರೆ.
ಏನಿದು ಆರೋಪ..?
ಈ ಹಿಂದೆ ಆರ್.ಅಶೋಕ್, ಬೆಂಗಳೂರು ಉತ್ತರ ತಾಲೂಕಿನ ಭೂ ಪರಿವರ್ತನೆ ಸಮಿತಿಯ ಅಧ್ಯಕ್ಷರಾಗಿದ್ದರು. ಈ ವೇಳೆ ಸೋಮನಹಳ್ಳಿಯ 8 ಎಕರೆ ಬಗರ್ ಹುಕ್ಕುಂ ಭೂ ಪ್ರದೇಶವನ್ನು ಅಕ್ರಮ ಮಾಡಿದ ಆರೋಪ ಮಾಜಿ ಡಿಸಿಎಂ ಆರ್.ಅಶೋಕ್ ಎದುರಿಸುತ್ತಿದ್ದಾರೆ. ಈ ಸಂಬಂಧ ಬಿಎಂಟಿಎಫ್ ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಇದನ್ನ ಪ್ರಶ್ನಿಸಿ ಆರ್.ಅಶೋಕ್, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಎಫ್ಐಆರ್ ದಾಖಲಾಗಿದೆ. ಕೂಡಲೇ ಎಫ್ಐಆರ್ ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಫ್ಐಆರ್ ರದ್ದು ಮಾಡಿ ತನಿಖೆಗೆ ತಡೆ ನೀಡಿತ್ತು.
ಇದೀಗ ಮತ್ತೆ ತನಿಖೆಯನ್ನ ಎಸಿಬಿ ಕೈಗೆತ್ತಿಕೊಂಡು ಆರ್ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಅದನ್ನ ಪ್ರಶ್ನಿಸಿ ಆರ್.ಅಶೋಕ್ ಹೈಕೋರ್ಟ್ ಮೇಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಎಸಿಬಿ ತನಿಖೆ ನಡೆಸಲು ಅಸ್ತು ಎಂದಿದೆ. ಈ ಹಿನ್ನೆಲೆಯಲ್ಲಿ ಆರ್ಅಶೋಕ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





