ಹುಬ್ಬಳ್ಳಿಯ
ಸೇವೆ ಮಾಡ್ಬೇಕು ಅನ್ನೋ ಮನಸ್ಸು ನಿಜಕ್ಕೂ ಅದು ಎಲ್ರಿಗೂ ಬರೋದಿಲ್ಲ. ಸೇವೆಯಲ್ಲಿಯೇ ದೇವರನ್ನ ಕಾಣೋರು ನಮ್ಮ ನಿಮ್ಮ ನಡುವೆ ಸಾಕಷ್ಟು ಜನ ಸಿಗ್ತಾರೆ. ಇವರು ಸೇವೆ ಮಾಡಿದ್ರೂ ಅದರಲ್ಲಿ ಒಂಚೂರು ಸ್ವಾರ್ಥವಿರೋದಿಲ್ಲ. ನಿಸ್ವಾರ್ಥ ಜೀವಿಗಳು ಇರೋದ್ರಿಂದಲೇ ಜೀವನ ಈಗಲೂ ಸಹ್ಯ ಎನಿಸುತ್ತಿದೆ. ಅದರಲ್ಲೂ ಹಸಿದವರಿಗೇ ಅನ್ನ ಹಾಕೋ ಸೇವೆಯಂತೂ ನಿಜಕ್ಕೂ ಪುಣ್ಯದ ಕೆಲಸ.
ಬಿಸಿ ಬಿಸಿ ಚಪಾತಿ, ಪಲ್ಯ, ಅನ್ನ ಸಾಂಬಾರ್.. ಸಿಹಿ ತಿನಿಸು ಇಲ್ಲುಂಟು. ಅಚ್ಚುಕಟ್ಟಾಗಿ ಮಹಿಳೆಯರೇ ಮುಂದೆ ನಿಂತು ಊಟ ಬಡಿಸ್ತಿದ್ರೇ ಅಷ್ಟೇ ಸಂಯಮದಿಂದಲೇ, ಊಟ ಮಾಡಲು ಸಾಲಾಗಿ ನಿಂತ್ಕೊಂಡಿದಾರೆ ಜನ. ಹುಬ್ಬಳ್ಳಿಯ ಅಕ್ಕಿಹೊಂಡದ ಮಹಾವೀರ್ಗಲ್ಲಿಯ ರೋಟಿಘರ್ ನಲ್ಲಿ ನಿತ್ಯ ಇಂಥ ದೃಶ್ಯವಿರುತ್ತೆ. ಇದರಲ್ಲೇನು ಅಂಥ ವಿಶೇಷ ಅಂದ್ಕೋಬೇಡಿ, ಇಲ್ಲಿ ಬರೋರಿಗೆ ಬರೀ 1 ರೂಪಾಯಿಗೇ ಹೊಟ್ಟೆ ತುಂಬ ಊಟ ಸಿಕ್ಕುತ್ತೆ. ಅದೇ ಇಲ್ಲಿನ ಸ್ಪೆಷಾಲಿಟಿ. ಅದ್ಹೇಗೆ ಸಾಧ್ಯರೀ ಅಂತ ಕೇಳ್ಬೇಡಿ. ಸಾಮಾಜಿಕ ಕಳಕಳಿಯುಳ್ಳ ಯುವಕರ ತಂಡ ಹಸಿದ ಹೊಟ್ಟೆ ತುಂಬಿಸೋ ಮಹತ್ಕಾರ್ಯಕ್ಕೆ ಮುಂದಾಗಿದೆ. ರುಚಿ ಜತೆ ಶುಚಿ ಊಟ ನಿತ್ಯ 300 ರಿಂದ 400 ನೂರು ಜನರಿಗೆ ಸಿಗುತ್ತೆ. ಹಳ್ಳಿಗಳಿಂದ ದುಡಿಯೋಕೆ ಅಂತ ಹುಬ್ಬಳ್ಳಿಗೆ ಬರೋ ಕಾರ್ಮಿಕರಿಗಿದು ವರದಾನವಾಗಿದೆ. ಪ್ರತಿದಿನವು ಒಂದೊಂದು ಬಗೆಯ ಆಹಾರ ತಯಾರಿಸಿ, ಬಂದವರಿಗೆ ಅಷ್ಟೇ ಪ್ರೀತಿಯಿಂದಲೇ ಉಣ ಬಡಿಸ್ತಾರೆ. ಆರು ವರ್ಷದಿಂದ ನಿತ್ಯ ನೂರಾರು ಜನ್ರಿಗೆ ಚಿಲ್ರೇ 1 ರೂ.ಯಿಗೇ ಊಟ ಸಿಗ್ತಿದೆ.
ಹುಬ್ಬಳ್ಳಿಯ ಜೈನ ಸಮುದಾಯದ ಯುವಕರು 1998ರಲ್ಲಿ ಮಹಾವೀರ್ ಯೂತ್ ಫೆಡರೇಷನ್ ಹೆಸರಿನಲ್ಲಿ ಸಾಮಾಜಿಕ ಸೇವಾ ಕಾರ್ಯ ಮಾಡ್ತಾಯಿತ್ತು. ಆಗ ಜೈನ ಮುನಿಯೊಬ್ಬರು ಹಸಿದವರಿಗೆ ಅನ್ನ ಹಾಕುವ ಕೆಲಸ ಮಾಡೋದಕ್ಕೆ ಸಲಹೆ ನೀಡಿದ್ರು. ಆಗಿನಿಂದಲೇ ಇಂಥ ಸೇವೆಗೆ ಯುವಕರು ಮುಂದಾದ್ರು. ಮುನಿಗಳ ಆಶಯದಂತೆ 2009ರಲ್ಲಿ ಈ ರೋಟಿಘರ್ ಶುರುವಾಗಿದೆ. ಅಂದಿನಿಂದ ಈವರೆಗೂ ಒಂದೇ ರೂಪಾಯಿಗೆ ಊಟ ಕೊಡ್ತಾಯಿದೆ. ನಿತ್ಯ ಊಟ ತಯಾರಿಗೆಂದೇ 7 ರಿಂದ 8ಸಾವಿರ ರೂ. ಖರ್ಚಾಗುತ್ತೆ. ಆದ್ರೇ, ಜನರಿಂದ 1 ರೂಪಾಯಿ ಮಾತ್ರ ಪಡೆಯುತ್ತಾರೆ. ಯಾಕಂದ್ರೇ, ದುಡಿಯೋ ವರ್ಗ ಸ್ವಾಭಿಮಾನಿಗಳು ಅಲ್ವೇ.. ಅದಕ್ಕೆ ಅವರ ಸ್ವಾಭಿಮಾನಕ್ಕೆ ಚ್ಯುತಿ ಬರದಿರಲೆಂದೇ ಬರೀ ಒಂದು ರೂಪಾಯಿ ನಿಗದಿ ಮಾಡಲಾಗಿದೆ.
ಇದಷ್ಟೇ ಅಲ್ಲ, ಫ್ರೀಯಾಗಿಯೇ ನೀಡಿದ್ರೇ ಅದರ ಮಹತ್ವ ಅರಿಯದೇ ಹಾಳು ಮಾಡದಿರಲಿ ಅನ್ನೋ ಉದ್ದೇಶವೂ ಇದರ ಹಿಂದಿದೆ. ಜೈನ ಸಮುದಾಯದ ಯುವಕರು ಇದನ್ನ ಮಾಡ್ತಿದ್ರೂ ಯಾವುದೇ ಪ್ರಚಾರ ಪಡೆಯೋದಿಲ್ಲ. ಸೇವೆಯೊಂದೇ ಉದ್ದೇಶವಾಗಿರೋವಾಗ ಅದೆಲ್ಲ ಯಾಕೆ ಅಂತಿದಾರೆ. ದೇವರು ದೇವರು ಅಂತ ಸಿಕ್ಕ ಸಿಕ್ಕ ಪುಣ್ಯ ಕ್ಷೇತ್ರಗಳಿಗೆ ತೆರಳ್ತಾರೆ. ಆದ್ರೇ, ಈ ರೀತಿ ಹಸಿದ ಹೊಟ್ಟೆ ತುಂಬಿಸೋದು ಯಾವ ದೇವರ ಸೇವೆಗಿಂತಲೂ ಕಡಿಮೆಯಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





