ಶಿವಮೊಗ್ಗ: ಯಡಿಯೂರಪ್ಪ ಅವರು ಸರ್ಕಾರ ಉಳಿಸಬಹುದು ಹಾಗೆಯೇ ಕೆಡವಬಹುದು. ಆದ್ರೆ, ಮನಸುಗಳನ್ನು ಕಟ್ಟಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ.ಶಿವಮೊಗ್ಗ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಹಾಗೂ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಂ.ಬಿ. ಭಾನುಪ್ರಕಾಶ್, ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಇಂದಿಗೂ ಒಪ್ಪಿಕೊಂಡಿಲ್ಲ. ಇದ್ದಕ್ಕಿದ್ದಂತೆ ಒಂದೂವರೆ ವರ್ಷದ ಹಿಂದೆ ನನ್ನನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ್ರು. ಇದೀಗ ಚುನಾವಣೆ ಬರುತ್ತಿದ್ದಂತೆ ಏಕಾಏಕಿ ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಹೀಗಾಗಿ ನಾನು ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿಲ್ಲ. ನನ್ನ ಸೈದ್ದಾಂತಿಕ ನಿಲುವು ಹಾಗೂ ನನ್ನ ಮನಸಾಕ್ಷಿ ಒಪ್ಪುವುದಿಲ್ಲ. ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ ಎಂದರು.ಆದ್ರೆ, ಬಿ.ವೈ.ರಾಘವೇಂದ್ರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ರಾಘವೇಂದ್ರ ಅವರು ಗೆಲ್ಲಬೇಕು ಎಂಬ ಹಂಬಲ ನನಗೂ ಇದೆ ಎಂದರು. ಇನ್ನು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲಬಹುದು, ಸರ್ಕಾರ ಉಳಿಸಬಹುದು ಹಾಗೆಯೇ ಕೆಡವಬಹುದು. ಆದ್ರೆ, ಮನಸುಗಳನ್ನು ಕಟ್ಟಲು ಆಗುವುದಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ರು.ನಾನು 35 ವರ್ಷದಿಂದ ಬಿಜೆಪಿಯಲ್ಲಿದ್ದು, ಕೆಲಸ ಮಾಡುತ್ತಿದ್ದೇನೆ, ಆದ್ರೆ ಎಂದೂ ಬಿಜೆಪಿಯಲ್ಲಿ ಲೆಟರ್ ಸಂಸ್ಕೃತಿ ಇರಲಿಲ್ಲ. ಈಗ ಲೇಟರ್ ಸಂಸ್ಕೃತಿ ತಂದಿದ್ದಾರೆ. ಕೆಜೆಪಿಯಿಂದ ಬಂದ ಯಡಿಯೂರಪ್ಪ ಅವರನ್ನ ಒಪ್ಪಿಕೊಂಡಿದ್ದೆವು. ಯಡಿಯೂರಪ್ಪ ಅವರಿಗೆ ಅವರ ವರ್ತನೆ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದವರನ್ನೇ ಕೆಟ್ಟವರನ್ನಾಗಿ ಮಾಡಿದ್ದಾರೆ. ಸೊಗಡು ಶಿವಣ್ಣ, ಶಿವಯೋಗಿ ಸ್ವಾಮಿ, ಗಿರೀಶ್ ಪಟೇಲ್ ಸೇರಿದಂತೆ ಹಲವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡದೆ, ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ರು. ಪಕ್ಷಕ್ಕೆ ಹೊಸಬರನ್ನು ಕರೆದುಕೊಂಡು ಬರುವ ಜೊತೆಗೆ ನಮ್ಮ ಪಕ್ಷದಲ್ಲೇ ಹತ್ತಾರು ವರ್ಷ ಕೆಲಸ ಮಾಡಿ ಪಕ್ಷದಿಂದ ಹೊರಗಿರುವವರನ್ನು ಮೊದಲು ಪಕ್ಷಕ್ಕೆ ಕರೆತರಬೇಕು ಎಂದು ಆಗ್ರಹಿಸಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





