ಹಾಸನ: ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಜಗಲಿ ಗ್ರಾಮದಲ್ಲಿ ಯುವಕರೇ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿದ್ದು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
15 ದಿನಗಳ ಹಿಂದೆ ಗ್ರಾಮ ಚನ್ನಯ್ಯ ಅವರ ಪತ್ನಿ ಮದ್ಯ ಸೇವನೆಯಿಂದ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಅದರಂತೆ ಬ್ಯಾಡರಜಗಲಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಬೈರಯ್ಯ ಹಾಗೂ ಮುತ್ತಣ್ಣ ಅವರನ್ನು ಕರೆಸಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದರು. ಅವರು ಮದ್ಯ ಮಾರಾಟ ನಿಲ್ಲಿಸುವುದಾಗಿ ಭರವಸೆ ನೀಡಿದ್ದರು.

ಆದರೂ ಮಂಗಳವಾರ ರಾತ್ರಿ ಸಕಲೇಶಪುರ ಟೋಲ್ ಗೇಟ್ ನ ಬಾರ್‌ವೊಂದರಿಂದ ಬಂದ ವ್ಯಕ್ತಿ ಬೈಕಿನಲ್ಲಿ ಮದ್ಯದ ಬಾಕ್ಸನ್ನು ಮುತ್ತಣ್ಣ ಅವರ ಮನೆಗೆ ತಲುಪಿಸಿ ಹಿಂದಿರುಗುತ್ತಿದ್ದ. ವಿಷಯ ತಿಳಿದು ಯುವಕರು ಆತನನ್ನು ಅಡ್ಡಗಟ್ಟಿ 24 ಕ್ವಾಟರ್ ಒರಿಜಿನಲ್ ಚಾಯ್ಸ್ ಮದ್ಯದ ಪಾಕೆಟ್‌ಗಳನ್ನು ವಶಪಡಿಸಿಕೊಂಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ವಾಸವಿದ್ದಾರೆ. ಗ್ರಾಮದಲ್ಲಿಯೇ ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಅನೇಕರು ಕುಡಿತದ ಚಟಕ್ಕೆ ಬಲಿಯಾಗಿ ಬದುಕು ಹಾಗೂ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸುತ್ತಿಲ್ಲ. ಹಾಗಾಗಿ ಗ್ರಾಮದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಗ್ರಾಮದ ಯುವಕರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

