ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಸೇನೆ ಸೇರಬಯಸುವ ಅಭ್ಯರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಆ ಯೋಜನೆಗೆ ರೈತ ಮುಖಂಡರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೌದು! ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಅಗ್ನಿಪಥ ಯೋಜನೆ ಮೂಲಕ ಸೇನೆಗೆ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕೇವಲ ಎರಡೂವರೆ ವರ್ಷಗಳ ಕಾಲ ಮಾತ್ರ ಅವರನ್ನು ಬಳಸಿಕೊಂಡು ಆ ನಂತರ ಅವರನ್ನು ಸೇನೆಯಿಂದ ಕೈಬಿಡುವುದು ಯಾವ ನ್ಯಾಯ. ಈ ಯೋಜನೆ ಯುವಕರನ್ನು ದಾರಿ ತಪ್ಪಿಸುವ ಯೋಜನೆಯಾಗಿದ್ದು, ಕೂಡಲೇ ಈ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
.
ಅಗ್ನಿಪಥ ಯೋಜನೆ ಒಳ್ಳೆಯ ಯೋಜನೆ ಎಂದು ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು ತಮ್ಮ ಮಕ್ಕಳನ್ನು ಯಾಕೆ ಈ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ. ಈ ನಾಯಕರ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅಗ್ನಿಪಥ್ ಎಂದು ಈ ದೇಶದ ಯುವ ಜನರ ದಿಕ್ಕು ತಪ್ಪಿಸುವುದನ್ನು ಕೂಡಲೇ ಬಿಡಬೇಕು ಎಂದು ವೆಂಕನಗೌಡ ಪಾಟೀಲ ಒತ್ತಾಯಿಸಿದರು.
ಈ ಅಗ್ನಿಪಥ್ ಯೋಜನೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ರಾಜ್ಯದಾದ್ಯಂತ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ಒಂದು ವೇಳೆ ಈ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯದೇ ಹೋದಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ರೈತ ಸಂಘಟನೆಗಳು ಮುಂದಾಗುತ್ತವೆ ಎಂದು ರೈತ ಮುಖಂಡರು ಎಚ್ಚರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





