ಬಳ್ಳಾರಿ : ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು, ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ.
ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ ಎನ್ನುತ್ತಾರೆ ಆದರೆ ಬಳ್ಳಾರಿ ಅಕ್ರಮ ಭೂ ಹಗರಣ ಪ್ರಕರಣದಲ್ಲಿ 300 ಕೋಟಿ ಅವ್ಯವಹಾರ ಆಗಿರುವುದು ಕಂಡು ಬರುತ್ತದೆ ಎಂದು ಉಗ್ರಪ್ಪ ಆರೋಪಿಸಿದರು.
ಬಳ್ಳಾರಿ ಅಕ್ರಮ ಭೂ ಹಗರಣ ಪ್ರಕರಣದಲ್ಲಿ 6 ಸಾವಿರ ಪುಟಗಳ ಚಾರ್ಜ್ ಶೀಟ್ ಹಾಕಲಾಗಿದೆ. ಬಳ್ಳಾರಿಯ ಲೋಕಾಯುಕ್ತ ಪೊಲೀಸರು 11 ಜನರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಎ1 ಆಗಿನ ಜಿಲ್ಲಾಧಿಕಾರಿ ಬಿ.ಶಿವಪ್ಪ, ಎ2 ಆರ್ ವೆಂಕಟೇಶ್, ಎ3 ಶಶಿಧರ ಬಗಲಿ, ಎ4 ವೀರೇಶಬಾಬು, ಎ6 ಶ್ರೀರಾಮುಲು. ಜಮೀನು ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ದೋಷಾರೋಪಣೆಯ 6,000 ಪುಟಗಳ ಪಟ್ಟಿಯನ್ನು ಕಳೆದ ಮಾರ್ಚ್‌ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ. ಸಚಿವ ಶ್ರೀರಾಮುಲು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

