ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ 150 ಕ್ಕೂ ಹೆಚ್ಚು ಸ್ಥಾನ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವೆಯಲ್ಲಿ ಮುಂದಿದೆ. 130 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ. ನಮ್ಮ ಪಕ್ಷದ ಮೂರು ಸರ್ವೆಗಳಲ್ಲೂ ಕಾಂಗ್ರೆಸ್ ಮುಂದಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಪ್ರವಾಸ ಮಾಡ್ತಾರೆ. ಬಿಜೆಪಿ ನೈತಿಕತೆ ಕಳೆದುಕೊಂಡಿದ್ದಾರೆ. ಜನ ಬಿಜೆಪಿ ಸರ್ಕಾರದ ಭ್ರಮ ನಿರಸನಗೊಂಡಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದೆ. ಜನರು ಯಾವಾಗ ಚುನಾವಣೆ ಬರುತ್ತೆ ಎಂದು ಕಾಯತ್ತಾ ಇದ್ದಾರೆ. ಈ ಬಾರಿ ಜನರು ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಬಿಜೆಪಿ 40% ಕಮಿಷನ್ ಸರ್ಕಾರ. ದೇಶದಲ್ಲಿಯೇ ರಾಜ್ಯ ಭ್ರಷ್ಟಾಚಾರದ ರಾಜಧಾನಿ ಆಗಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಇದೀಗ ಜನ ಸಂಕಲ್ಪ ಯಾತ್ರೆ ನಾಟಕ ಮಾಡುತ್ತಿದೆ. ಅದರ ಬದಲು ಸರ್ಕಾರ ಕ್ರಮೆ ಯಾತ್ರೆ ಮಾಡಬೇಕು. ನಾವು 40% ಭ್ರಷ್ಟಾಚಾರ ಮಾಡಿದ್ದೇವೆ. ಜನರ ಸಮಸ್ಯೆಗೆ ಸ್ಪಂದಿಸಿಲ್ಲ, ನಾವು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹಾಗಾಗಿ ನಮಗೆ ಕ್ಷಮೆ ಮಾಡಿ ಎಂದು ಕೇಳಿಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ಜನ ಬೆಂಗಳೂರು ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಜನ ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಬಿಜೆಪಿಯವರಿಗೆ ಸೋಲ್ತೀವಿ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ಸಚಿವ ಅಶ್ವಥ್ ನಾರಾಯಣ ಅವರಿಗೆ ಸೇರಿದ ಚಿಲುಮೆ ಕಂಪನಿಯವರಿಗೆ ಪೊಲೀಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳು, ಅಶ್ವಥ್ ನಾರಾಯಣ,ತುಷಾರ್ ಗಿರಿನಾಥ್ ಮೇಲೆ ದೂರು ದಾಖಲಾಗಬೇಕು. ಇದು ಕೇವಲ ಬೆಂಗಳೂರು ಬಿಬಿಎಂಪಿ ಅಲ್ಲ ಇಡೀ ರಾಜ್ಯದಲ್ಲಿ ಈ ಕಂಪನಿಯಿಂದ ಕೆಲಸ ಶುರುವಾಗಿದೆ. ಚುನಾವಣೆಯಲ್ಲಿ ಬಿಜೆಪಿ ವೋಟ್ ಕದಿಯೋ ಕೆಲಸ ಮಾಡ್ತೀದೆ. ಇದರ ವಿರುದ್ದ ಹೋರಾಟ ಮಾಡ್ತೀವಿ. ನಾಳೆ ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಆಯುಷ್ಯ ಇಲ್ಲ. ಇದೇ ತಂತ್ರಗಾರಿಕೆಯನ್ನು ಕೇವಲ ಬೆಂಗಳೂರು ಅಲ್ಲ, ರಾಜ್ಯದ ಎಲ್ಲ ಕಡೆ ಮಾಡಬೇಕ ಅಂತಾ ಹೊರಟಿದ್ರು.
ಇವರ ಉದ್ದೇಶ ಇವಿಎಮ್ ಹ್ಯಾಕ್ ಮಾಡೋದು, ವೋಟ್ ಡಿಲೀಟ್ ಮಾಡೋದು ಎಂದ ಸಲೀಂ ಅಹ್ಮದ್ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನಿಲಕುಮಾರ ಪಾಟೀಲ್, ಅಲ್ತಾಫ ಹಳ್ಳೂರು, ಎನ್.ಹೆಚ್.ಕೊನರೆಡ್ಡಿ, ದೀಪಕ್ ಚುಂಚೂರೆ, ವಿನೋದ್ ಅಸೂಟಿ, ಪಿ.ಹೆಚ್.ನಿರಲಕೇರಿ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

