ಹುಬ್ಬಳ್ಳಿ: ಹೀಗೆ ದೀಪಗಳ ಬೆಳಕಿನಲ್ಲಿ ಪ್ರಜ್ವಲಿಸುವ ದೇಗುಲ. ಎಲ್ಲೆಡೆಯೂ ಓಂ ನಮಃ ಶಿವಾಯ ಓಂಕಾರ ನಾದ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಸಿದ್ಧಾರೂಢರ ಮಠ.
ಉತ್ತರ ಕರ್ನಾಟಕದ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಸಿದ್ಧಾರೂಢರ ಮಠದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅಂಧಕಾರವನ್ನು ದೂರ ಮಾಡು ಜ್ಞಾನದ ದೀಪವನ್ನು ಬದುಕಿನಲ್ಲಿ ಬೆಳಗಿಸು ಎಂದು ಲಕ್ಷಾಂತರ ಭಕ್ತರು ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಧಾರವಾಡ, ಹಾವೇರಿ, ಗದಗ ಹಾಗೂ ಬೆಳಗಾವಿ ಮೂಲಗಳಿಂದ ಭಕ್ತರು ಆಗಮಿಸಿದ್ದು, ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಿದರು.
ಇನ್ನೂ ಮಠದ ಆವರಣದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಲಕ್ಷ ದೀಪೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಣ್ಣಿನ ಹಣತೆಯಲ್ಲಿ ಭಕ್ತರು ಎಣ್ಣೆ ಹಾಕಿ ದೀಪ ಹಚ್ಚಿ ಓಂಕಾರ ನಾದ
ಮೊಳಗಿಸುವ ಮೂಲಕ ಸದ್ಗುರು ಸಿದ್ಧಾರೂಢರ ಕೃಪಾ ಕಟಾಕ್ಷಕ್ಕೆ ಪಾತ್ರರಾದರು. ಉತ್ತರ ಕರ್ನಾಟಕ ಭಾಗದಲ್ಲಿಯೇ ವಿಶೇಷವಾಗಿ ಲಕ್ಷ ದೀಪೋತ್ಸವ ಆಚರಣೆ ಮಾಡಲಾಗುತ್ತಿದ್ದು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕ್ಷಣಗಳಿಗೆ ಲಕ್ಷ ದೀಪೋತ್ಸವ ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಸದ್ಗುರು ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ ಎಂಬುವಂತೇ ಸದ್ಗುರುವಿನ ಸನ್ನಿದಾನದಲ್ಲಿ ಬೆಳಗುವ ಜ್ಯೋತಿ ಎಲ್ಲರ ಮನ ಹಾಗೂ ಮನೆಯನ್ನು ಬೆಳಗಲಿ ಎಂಬುವುದು ನಮ್ಮ ಆಶಯ.
bigtvnews | Hubli Dharwad News | Kannada News | Karnataka News Hubli News | News In Hubli | Local news

