ಕ್ರೆಡೈ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ 10ರಂದು
ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ಕೊಡುತ್ತಿರುವ ಸಂಸ್ಥೆಗೆ ಪ್ರದೀಪ ರಾಯ್ಕರ ಸಾರಥ್ಯ
ಹುಬ್ಬಳ್ಳಿ: ಸರ್ಕಾರಕ್ಕೆ ಆದಾಯ ತಂದು ಕೊಡುವ ಎರಡನೆಯ ಅತೀ ದೊಡ್ಡ ಉದ್ಯಮ ರಿಯಲ್ ಎಸ್ಟೇಟ್. ಈ ಉದ್ಯಮವನ್ನು ಸುಸಂಘಟಿತ ಹಾಗೂ ಕಾನೂನು ಬದ್ಧವಾಗಿ ನಡೆಸಿಕೊಂಡು ಬರುತ್ತಿರುವ
ಕ್ರೆಡೈಗೆ ನೂತನ ರಾಜ್ಯಾಧ್ಯಕ್ಷರಾಗಿ ಹುಬ್ಬಳ್ಳಿಯ ಉದ್ಯಮಿ ಪ್ರದೀಪ ರಾಯ್ಕರ್ ಅವರು ಆಯ್ಕೆಯಾಗಿದ್ದು, ಇವರ ಅಧಿಕಾರ ಸ್ವೀಕಾರ ಸಮಾರಂಭ ಹುಬ್ಬಳ್ಳಿಯ ಡೆನ್ನಿಸನ್ಸ್ ಹೋಟೆಲ್ನಲ್ಲಿ ಜೂನ್ 10ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಪ್ರದೀಪ ಅವರು ಹುಬ್ಬಳ್ಳಿಯವರೇ ಆಗಿರುವ ಕಾರಣ ಅಧಿಕಾರ ಸ್ವೀಕಾರ ಸಮಾರಂಭವನ್ನೂ ಅದ್ದೂರಿಯಾಗಿ ಹುಬ್ಬಳ್ಳಿಯಲ್ಲಿಯೇ ಮಾಡಲು ಇಚ್ಛಿಸಿದ್ದೇವೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರೇತರವಾಗಿ ಅದೂ ಹುಬ್ಬಳ್ಳಿಯವರು ಕ್ರೆಡೈ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಖುಷಿಯ ವಿಚಾರ.

ಅಂದು ನಡೆಯುವ ಸಮಾರಂಭದಲ್ಲಿ ಕ್ರೆಡೈ ನಿಕಟಪೂರ್ವ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಅವರು ನೂತನ ಅಧ್ಯಕ್ಷ ಪ್ರದೀಪ ರಾಯ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವರು. ಇದೇ ವೇಳೆ ಹುಬ್ಬಳ್ಳಿ ಕ್ರೆಡೈ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಕೊಠಾರಿ ಅವರೂ ಅಧಿಕಾರ ಸ್ವೀಕಾರ ಮಾಡುವರು.
ಕ್ರೆಡೈನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಇರ್ಫಾನ್ ರಜಾಕ್, ಸುನಿಲ್ ಮಂತ್ರಿ, ರಮಾಣಿ ಶಾಸ್ತ್ರಿ, ಶ್ರೀಧರನ್ ಸ್ವಾಮಿನಾಥನ್ ಸೇರಿದಂತೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದವರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಇಂಥ ದಿಗ್ಗಜ್ಜರು ಹುಬ್ಬಳ್ಳಿಗೆ ಮೊಟ್ಟ ಮೊದಲ ಬಾರಿ ಆಗಮಿಸುತ್ತಿರುವ ಹೆಮ್ಮೆ.
ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವಲ್ಲಿ ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮ ವ್ಯಾಪಕವಾಗಿ ಹಬ್ಬಿದೆ. ನಿಯಮ ಬದ್ಧವಾಗಿ ಹಾಗೂ ವಿಶ್ವಾಸಾರ್ಹತೆಯಿಂದ ರಿಯಲ್ ಎಸ್ಟೇಟ್ ಉದ್ಯಮ ಬೆಳೆಸಬೇಕು ಎನ್ನುವ ಉದ್ದೇಶದಿಂದ ಸಮಾನ ಮನಸ್ಕರು ಹುಟ್ಟು ಹಾಕಿದ ಕ್ರೆಡೈ ಇಂದು ದೇಶದ ತುಂಬ ವ್ಯಾಪಿಸಿದೆ. ಕ್ರೆಡೈ ಮಾನ್ಯತೆ ಪಡೆದಿರುವವರಿಂದಲೇ ಸೈಟ್, ಮನೆ ಖರೀದಿಸಬೇಕು ಎನ್ನುವ ಜಾಗೃತಿ ಜನರಲ್ಲಿ ಮೂಡಿದೆ. ಕರ್ನಾಟಕದಲ್ಲಿ ಆರಂಭವಾದ ಕ್ರೆಡೈ ಇಂದು ದೇಶದ 21 ರಾಜ್ಯದಲ್ಲಿ ವ್ಯಾಪಿಸಿದೆ. ಪ್ರಮುಖವಾಗಿ 230 ನಗರದಲ್ಲಿ ಕ್ರೆಡೈ ಅಸ್ಥಿತ್ವವಿದೆ. 13,300 ಉದ್ಯಮಿಗಳು ಕ್ರೆಡೈ ಅಡಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸರ್ಕಾರಕ್ಕೆ ಆಗುವ ಮೋಸ ತಪ್ಪಿಸಿ ನೈಜ ಆದಾಯ ತಂದುಕೊಡುವಲ್ಲಿ ಕ್ರೆಡೈ ಪಾತ್ರ ಹಿರಿದಾಗಿದೆ.
ಸರ್ಕಾರಕ್ಕೆ ಆದಾಯ ತಂದುಕೊಡುವಲ್ಲಿ ಎರಡನೇ ಸ್ಥಾನದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮವು ಉದ್ಯೋಗ ಸೃಷ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ. 50 ಲಕ್ಷಕ್ಕೂ ಅಧಿಕ ಜನರು ನೇರವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೆಲಸ ಪಡೆದಿದ್ದಾರೆ. ಇದರೊಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮವು ಸಿಮೆಂಟ್ ಕಾರ್ಖಾನೆ, ಸ್ಟೀಲ್ ಕಾರ್ಖಾನೆ, ಕಟ್ಟಿಗೆ ಸಾಮಗ್ರಿ, ಪ್ಲಂಬಿಂಗ್ ಸಾಮಗ್ರಿ, ಹಾರ್ಡ್ವೇರ್, ಗ್ಲಾಸ್ ಕಾರ್ಖಾನೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ರಾಜ್ಯದಲ್ಲಿ ಅಪರೋಕ್ಷವಾಗಿ 2 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದೆ ಎನ್ನುವುದು ಹೆಮ್ಮೆಯ ವಿಚಾರ.
ಕ್ರೆಡೈನಂತಹ ದೊಡ್ಡ ಸಂಸ್ಥೆಗೆ ಹುಬ್ಬಳ್ಳಿಯ ಪ್ರದೀಪ ರಾಯ್ಕರ ಅವರು

ಅಧ್ಯಕ್ಷರಾಗಿರುವುದರಿಂದ ಟೈರ್-2, ಟೈರ್-3 ಸಿಟಿಗಳಿಗೂ ಬಲಸಿಕ್ಕಂತಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಹೊಸ ಆವಿಷ್ಕಾರಗಳಂತೂ ನಡೆಯಲಿದೆ. ಇದರ ಜೊತೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಮುಂಗಳೂರು, ಮೈಸೂರು, ಕಲಬುರ್ಗಿ, ವಿಜಯಪುರ, ದಾವಣಗೆರೆ ಅಂತಹ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವ್ಯಾಪಕವಾಗಿ ಬೆಳೆಸಲು ಪ್ರದೀಪ ರಾಯ್ಕರ ನೆರವಾಗುತ್ತಾರೆ ಎನ್ನುವ ವಿಶ್ವಾಸವಿದೆ. ಸರ್ಕಾರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ಕೊಂಡಿಯಾಗಿ ನೂತನ ಅಧ್ಯಕ್ಷರು ಕೆಲಸ ಮಾಡುತ್ತಾರೆ. ಕ್ರೆಡೈ ಮುಖೇನ ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ಕೌಶಲ ಅಭಿವೃದ್ಧಿಯಂತಹ ವಿನೂತನ ಕಾರ್ಯಚಟುವಟಿಕೆಗಳನ್ನು ಪ್ರದೀಪ ಅವರು ಕೈಗೊಳ್ಳುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಮೆರಗು ತಂದುಕೊಡುತ್ತಾರೆ ಎನ್ನುವ ವಿಶ್ವಾಸವಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





