ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 3ರಂದು 11 ಗಂಟೆಗೆ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಭೇಟಿ ವೇಳೆ ಸಿದ್ದರಾಮಯ್ಯ ಅವರು, ರಾಜ್ಯದ ಯೋಜನೆಗಳು, ಅನುದಾನ ಸಂಬಂಧ ಬೇಡಿಕೆ ಇಡಲಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.
ರಾಜ್ಯ ಸರ್ಕಾರ ಪ್ರಮುಖ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿ ಪೂರೈಕೆ ಸಂಬಂಧ ಪ್ರಧಾನಿಗೆ ಮನವಿ ಮಾಡುವ ಸಾಧ್ಯತೆ ಇದೆ. ಕೇಂದ್ರದ ಅನುದಾನ ಹೆಚ್ಚಿಸುವಂತೆ ಮನವಿ ಮಾಡುವುದರ ಜೊತೆಗೆ ನೀರಾವರಿ ಯೋಜನೆಗಳಿಗೆ ಅನುದಾನ, ಜಲಜೀವನ್ ಮಿಷನ್, ನರೇಗಾಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಸಿದ್ದರಾಮಯ್ಯ ಕೋರಲಿದ್ದಾರೆ.
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ 5,495 ಕೋಟಿ ರೂ. ಗಳ ಮಧ್ಯಂತರ ಪರಿಹಾರಕ್ಕೆ ವಿಶೇಷ ಅನುದಾನ ನೀಡುವಂತೆ ಕೋರುವ ಸಾಧ್ಯತೆ ಇದೆ. ಜೊತೆಗೆ ಬರ ಮಾನದಂಡವನ್ನು ಪರಿಷ್ಕರಿಸಿ ರಾಜ್ಯಕ್ಕೆ ಬರ ಪರಿಹಾರ ನೀಡುವಂತೆಯೂ ಮನವಿ ಮಾಡುವ ಸಾಧ್ಯತೆ ಇದೆ. ಜಿಎಸ್‌ಟಿಯಲ್ಲೂ ರಾಜ್ಯದ ಪಾಲು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಪ್ರಧಾನಿ ಮೋದಿ ಬಳಿ ಸಿದ್ದರಾಮಯ್ಯ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಅದೇ ದಿನ ಸಿದ್ದರಾಮಯ್ಯ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಸಚಿವರ ಜೊತೆಗೂ ರಾಜ್ಯದ ಪ್ರಮುಖ ರಸ್ತೆ ಯೋಜನೆಗಳು, ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





