ಬೆಂಗಳೂರು: ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಅರಸಿ ಬಂದವರಿಗೆಲ್ಲ ನೀರು, ನೆಳಲನ್ನು ಒದಗಿಸುವ ಮಹಾಸಂರಕ್ಷಕರ ಭ್ರಷ್ಟ ಸಾಧನೆಯ ಪಕ್ಷಿನೋಟ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ. ಕೆಪಿಸಿಎಲ್‌ನ 447 ಕೋಟಿ ಮೆಗಾ ಹಗರಣದಿಂದ ಡಿಕೆಶಿ ಅವರನ್ನು ಸಂರಕ್ಷಿಸಿದ್ದೂ ಈ ಭ್ರಷ್ಟ ಪೋಷಕ ಎಂದು ವಾಗ್ದಾಳಿ ನಡೆಸಿದೆ.
ಪಿಎಫ್‌ಐನ 175 ಗೂಂಡಾಗಳ ಮೇಲಿದ್ದ ಕೇಸುಗಳನ್ನು ವಜಾ ಮಾಡಿದ್ದೇ ಈ ಭ್ರಷ್ಟ ಪೋಷಕ. 1,700 ಪಿಎಫ್ಐ ಪ್ರಕರಣಗಳನ್ನು ಹಿಂಪಡೆದದ್ದು ಈ ಭ್ರಷ್ಟ ಪೋಷಕ, ಹೈಕಮಾಂಡ್‌ಗೆ 1,000 ಕೋಟಿ ಕಪ್ಪ ಸಾಗಿಸಿದ ಎಂ.ಎಲ್.ಸಿ. ಗೋವಿಂದರಾಜು ಅವರನ್ನು ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ. ಕಡಕ್ ಅಧಿಕಾರಿ ಅನುರಾಗ್ ತಿವಾರಿ, ಗಣಪತಿ ಅವರನ್ನು ಸಾವಿಗೆ ತಳ್ಳಿ ಕುಚುಕು ಗೆಳೆಯ ಕೆ. ಜೆ. ಜಾರ್ಜ್ ರಕ್ಷಿಸಿದ್ದೇ ಈ ಭ್ರಷ್ಟ ಪೋಷಕ ಎಂದು ಬಿಜೆಪಿ ಹೇಳಿದೆ.
ಇಜಿಎಲ್ ಅಕ್ರಮದಲ್ಲಿ ಕೆ. ಜೆ. ಜಾರ್ಜ್‌ಗೆ ದಡ ಮುಟ್ಟಿಸಿದ್ದೂ ಈ ಭ್ರಷ್ಟ ಪೋಷಕರೇ. ಕಾಂಗ್ರೆಸ್ ಭ್ರಷ್ಟರ ಕೂಪ, ಇವರ ಹೈಕಮಾಂಡೇ ಮುಖ್ಯ ಅತಿಥಿ. ಹಾಗಾಗಿ, ಸಿದ್ದರಾಮಯ್ಯರವರಿಗೆ ಭ್ರಷ್ಟರ ಸಂಕುಲ ವಿಸ್ತರಣೆ ಪರಮ ಕರ್ತವ್ಯವೂ, ಕಲ್ಯಾಣಕಾರಿಯೂ ಆಗಿರುವುದು ನಾಡಿನ ದುರಂತ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಟುಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




