ಮಂಗಳೂರು: ಮಂಗಳೂರಿನಲ್ಲಿ ವ್ಯಾಪಾರದಲ್ಲಿ ಧರ್ಮ ದಂಗಲ್ ಮತ್ತೆ ಮುನ್ನಲೆಗೆ ಬಂದಿದೆ. ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಷಷ್ಠಿ ಮಹೋತ್ಸವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಣೆ ಮಾಡಿರುವ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 14 ರಿಂದ 19 ರವರೆಗೆ ಷಷ್ಟಿ ಮಹೋತ್ಸವ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಈ ಷಷ್ಟಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ವ್ಯಾಪಾರ ನಡೆಯುತ್ತದೆ. ಆದರೆ ಇಲ್ಲಿ ಧಾರ್ಮಿಕ ತಾರತಮ್ಯ ನಡೆದಿದೆ.
ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮಂಡಳಿ ಷಷ್ಟಿ ಸಂತೆ ವ್ಯಾಪಾರದ ಹಂಚಿಕೆ ನಡೆಸಿದೆ. ಈ ವೇಳೆ ಜಾಗ ಕೇಳಲು ಹೋಗಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿದೆ. ಬೇಕಾದರೆ ಹಿಂದೂಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಆಡಳಿತ ಮಂಡಳಿ ಸೂಚಿಸಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಫಲವಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಬಡ ಸಂತೆ ವ್ಯಾಪಾರಿಗಳ ಜೊತೆ ನಿಲ್ಲಲಾಗದ ಸರ್ಕಾರಕ್ಕೆ ಧಿಕ್ಕಾರ ಎಂದು ಮುಸ್ಲಿಂ ವ್ಯಾಪಾರಿಗಳು ಕಿಡಿಕಾರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





