ಮೈಸೂರು:ಸುತ್ತಲೂ ಹಸಿರಿನಿಂದ ಕಂಗೊಳಿಸುವ ನಿಸರ್ಗಸಿರಿ, ಮರಳ ರಾಶಿ ನಡುವಿನ ದೇವಾಲಯಗಳು, ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯ ಚೆಲುವು ಮನಪುಳಕಗೊಳಿಸುತ್ತದೆ. ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ತಲಕಾಡಿನ ಸುಂದರತೆಗೆ ಸಾಕ್ಷಿಯಾಗಿದೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಇಲ್ಲಿ ಒಂದಷ್ಟು ಹೊತ್ತು ಸಮಯ ಕಳೆಯಲು ಇಷ್ಟಪಡುತ್ತಾರೆ.ಮೈಸೂರು ಜಿಲ್ಲೆಗೆ ಸೇರಿರುವ ತಲಕಾಡು ಐತಿಹಾಸಿಕ ಸ್ಥಳವಾಗಿ, ಸುಂದರ ಪ್ರವಾಸಿ ತಾಣವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ. ಕಾರಣ ಸಮುದ್ರತೀರದ ಮರಳಿನಲ್ಲಿ ಹೆಜ್ಜೆ ಹಾಕುತ್ತಾ ಖುಷಿಪಡಲು ಸಾಧ್ಯವಾಗದವರು ಇಲ್ಲಿನ ಮರಳಿನಲ್ಲಿ ಆಟವಾಡಿ ಖುಷಿಪಡುತ್ತಾರೆ. ಹೀಗಾಗಿ ವೀಕೆಂಡ್ ಕಳೆಯಲು ಪ್ರವಾಸಿಗರು ಇತ್ತ ಬರುವುದು ಮಾಮೂಲಾಗಿದೆ.
ಮೈಸೂರು ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ತಲಕಾಡು ವಿಭಿನ್ನ ಮತ್ತು ವಿಶಿಷ್ಟ ಕ್ಷೇತ್ರವಾಗಿದೆ. ಮೇಲ್ನೋಟಕ್ಕೆ ಇದು ಪೌರಾಣಿಕ ಮತ್ತು ಐತಿಹಾಸಿಕ ಸ್ಥಳವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ನಿಸರ್ಗ ಸುಂದರತೆ ಇಲ್ಲಿನ ಆಕರ್ಷಣೆಯಾಗಿದೆ. ಇಲ್ಲಿಗೆ ಯಾರೇ ಬಂದರೂ ಅವರೊಮ್ಮೆ ಇಲ್ಲಿನ ನಿಸರ್ಗದತ್ತ ಕಣ್ಣು ಹಾಯಿಸಿದರೆ ಇಲ್ಲಿಂದ ಕಂಡು ಬರುವ ಪ್ರಕೃತಿ ಚೆಲುವಿನ ನೋಟ ಮೈಮನನವಿರೇಳಿಸುತ್ತದೆ
bigtvnews | Hubli Dharwad News | Kannada News | Karnataka News Hubli News | News In Hubli | Local news




