Breaking News

ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸತತವಾಗಿ 5 ಗಂಟೆಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡು, ಮನೆ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಪರದಾಡುವಂತಾಗಿದೆ. ಹಳ್ಳ ಕೊಳ್ಳಗಳು ತುಂಬಿದ್ದು, ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆ ಇಡೀ ರಾತ್ರಿ ಸತತವಾಗಿ ಅಬ್ಬರಿಸಿತು. ನಗರದಲ್ಲಿ ಜೋರು ಮಳೆ ಸುರಿದರೆ, ಜಿಲ್ಲೆಯ ವಿವಿಧೆಡೆ ಗುಡುಗು ಸಹಿತವಾಗಿ ಸುರಿಯಿತು. ಅದರಲ್ಲೂ ನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಶಾಲಿ ನಗರ, ಭಾಗವಾನ್ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ. ಕುಟುಂಬಸ್ಥರು ರಾತ್ರಿ ಜಾಗರಣೆ ಮಾಡುವಂತೆ ಆಗಿತ್ತು. ಮನೆಗಳಲ್ಲಿರುವ ಪಡಿತರ, ಇನ್ನಿತರ ವಸ್ತುಗಳು ಮಳೆ ನೀರಿಗೆ ಹಾಳಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ, ಬೈಕ್ ಗಳು ನೀರಲ್ಲಿ‌ ಮುಳುಗಿವೆ. ಮನೆಗಳಿಂದ ನೀರು ಹೊರ ಹಾಕಲು ಹರಸಾಹಸ ಪಡುವಂತಾಗಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ಸ್ಥಳಗಳಿಗೆ ಭೇಟಿ ಕೊಟ್ಟು ನೀರು ಹೊರ ಹಾಕುವಲ್ಲಿ ನೆರವಾಗಿದ್ದಾರೆ.
ವಿಜಯಪುರ ನಗರ ಮಾತ್ರವಲ್ಲದೇ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ತಿಕೋಟಾ, ನಿಡಗುಂದಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿದೆ.
ಜಿಲ್ಲೆಯ ಹಲವೆಡೆ ಮಳೆ ಆರ್ಭಟಿಸಿದೆ. ರಾತ್ರಿ 8 ರಿಂದ 11, 12 ಗಂಟೆಯವರೆಗೂ ನಿಡಗುಂದಿ ತಾಲೂಕಿನ ಇಟಗಿ ಹೋಬಳಿಯಲ್ಲಿ 77 ಎಂಎಂ, ಆಲಮಟ್ಟಿಯಲ್ಲಿ 67 ಎಂಎಂ, ತಿಕೋಟಾ ತಾಲೂಕಿನ ಸಿದ್ದಾಪುರದಲ್ಲಿ 75 ಎಂಎಂ, ಘೋನಸಗಿಯಲ್ಲಿ 68 ಎಂಎಂ, ಬಸವನಬಾಗೇವಾಡಿ ತಾಲೂಕಿನ ದಿಂಡವಾರದಲ್ಲಿ 78 ಎಂಎಂ, ನರಸಲಗಿಯಲ್ಲಿ 69.5 ಎಂಎಂ, ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ 64.5 ಎಂಎಂ, ಮುದ್ದೇಬಿಹಾಳ ಹೋಬಳಿಯಲ್ಲಿ 77 ಎಂಎಂ ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *