ಬೆಂಗಳೂರು: ಗಂಗಾವತಿಯ ಶಾಸಕ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಇಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಇದರ ಬೆನ್ನಲ್ಲೇ ರೆಡ್ಡಿ ಅವರು ನವರಾತ್ರಿಯ ಮೊದಲ ದಿನವೇ ಬಳ್ಳಾರಿಗೆ ತೆರಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪು ಖುಷಿ ತಂದಿದೆ. ನವರಾತ್ರಿ ಮೊದಲ ದಿನ ನಾನು ಬಳ್ಳಾರಿಗೆ ಭೇಟಿ ನೀಡಿ, ದುರ್ಗಾ ಮಾತೆಯ ಆಶೀರ್ವಾದ ಪಡೆಯುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಜಿಲ್ಲೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ನಾನು ಬಳ್ಳಾರಿಗೆ ಏನು ಮಾಡಿರುವೆ ಎಂಬುದು ಅಲ್ಲಿನ ಜನರಿಗೆ ತಿಳಿದಿದೆ ಎಂದರು.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸಚಿವನಾಗಿದ್ದೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಲ್ಲವೂ ಜನರಿಗೆ ತಿಳಿದಿದೆ. ಈಗ ಕೋರ್ಟ್ ನನಗೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಿದೆ. ಇದರಿಂದ ಸಂತಸವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಜನಾರ್ದನ ರೆಡ್ಡಿ ಅವರಿಗೆ ಕಳೆದ 14 ವರ್ಷಗಳಿಂದ ತವರು ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆ ಅವರು ಕೊಪ್ಪಳದ ಗಂಗಾವತಿ ಹಾಗೂ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಕೆಲ ವರ್ಷಗಳ ಹಿಂದೆ ಪುತ್ರಿ ಬ್ರಹ್ಮಣಿ ವಿವಾಹದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭ 10ಕ್ಕೂ ಹೆಚ್ಚು ದಿನಗಳ ಕಾಲ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಕೋರ್ಟ್ ಅನುಮತಿ ನೀಡಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

