ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಂಜೀವಿನಿ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ 18ನೇ ಕಂತಿನ ನಿಧಿ ರೈತರ ಖಾತೆಗೆ ನೇರ ವರ್ಗಾವಣೆಯಾದ ಬಳಿಕ ಪ್ರತಿಕ್ರಿಯಿಸಿರುವ ಸಚಿವರು, ಈ ಯೋಜನೆ ರೈತರಿಗೆ ಉತ್ತೇಜನ ನೀಡಿದೆ ಎಂದಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 6000 ರೂ. ಧನಸಹಾಯ ನೀಡುವ ಮೂಲಕ ದೇಶದ 11 ಕೋಟಿ ರೈತರಿಗೆ ಸಂಜೀವಿನಿಯಾಗಿದೆ ಎಂದಿದ್ದಾರೆ. ಈ ಯೋಜನೆಯಿಂದಾಗಿ ದೇಶದಲ್ಲಿ ಕೃಷಿಗೆ ಅಪೂರ್ವ ಉತ್ತೇಜನ ದೊರಕಿದೆ. ರೈತರ ಸಾಲವನ್ನು ಕಡಿಮೆ ಮಾಡಿದೆ. ಅಲ್ಲದೇ, ಗ್ರಾಮೀಣ ಪ್ರದೇಶದ ಸಮುದಾಯಗಳನ್ನು ಸಶಕ್ತರನ್ನಾಗಿಸಿದೆ ಎಂದು ಪ್ರತಿಪಾದಿಸಿದ್ದಾರೆ
ಕೃಷಿ ಸಮ್ಮಾನ್ ಯೋಜನೆ ಭಾರತದ ಕೃಷಿಕರನ್ನು ಮಾತ್ರವಲ್ಲ ದೇಶವನ್ನೇ ಸ್ವಾವಲಂಬಿ ಮಾಡುವತ್ತ ಒಂದು ಮಹತ್ತರ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ ಜೋಶಿ.
ಕಿಸಾನ್ ಸಮ್ಮಾನ್ ಯೋಜನೆಯಡಿ 18 ನೇ ಕಂತಿನಲ್ಲಿ ಒಟ್ಟು 9.4 ಕೋಟಿ ರೈತರಿಗೆ 20 ಸಾವಿರ ಕೋಟಿ ನೇರ ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ 4712 ಲಕ್ಷ ರೈತರು 942 ಕೋಟಿ ರು. ಪಡೆದಿದ್ದಾರೆ ಎಂದು ಸಚಿವ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.
ಧಾರವಾಡದ 1.15 ಲಕ್ಷ ರೈತರಿಗೆ ಸಮ್ಮಾನ್ ನಿಧಿ: ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರು ಇದರ ಪ್ರಯೋಜನ ಪಡೆದಿದ್ದಾರೆ. 23.09 ಕೋಟಿ ರೂಪಾಯಿ ಧಾರವಾಡ ರೈತರ ಖಾತೆಗೆ ಜಮೆಯಾಗಿದ್ದು, ದಸರಾ ಹಬ್ಬದ ವೇಳೆ ರೈತರಲ್ಲಿ ಖುಷಿ ತಂದಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

