ಚಿತ್ರದುರ್ಗ: ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ಲಾಭ ತಲುಪಿಸಲು ಪ್ರಯತ್ನಿಸುವಂತೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಡ ಜನರ ಏಳಿಗೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಎಲ್ಲ ಅರ್ಹ ಫಲಾನುಭವಿಗಳಿಗೆ ದೊರಕಬೇಕು. ಜಿಲ್ಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ಕುರಿತು ಸಾರ್ವಜನರಿಗೆ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕು ಎಂದರು.
ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಜಿಲ್ಲೆಯ ಲಕ್ಷಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆಗಳ ಅಡಿ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಜಮೆ ಮಾಡಿದ ಹಣ, ಫಲಾನುಭವಿಗಳ ಸಂಖ್ಯೆಗಳ ಸಂಕ್ಷಿಪ್ತ ಪ್ರಗತಿ ವಿವರನ್ನು ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂದಿನ ಫಲಕಗಳಲ್ಲಿ ಬರೆದು ಪ್ರದರ್ಶಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಪ್ರತಿ ತಿಂಗಳು ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಯಾಣಿಸಿದ ಮಹಿಳಾ ಫಲಾನುಭವಿಗಳು ಹಾಗೂ ಸರ್ಕಾರದಿಂದ ಪಾವತಿಸಿದ ಮೊತ್ತದ ವಿವರಗಳನ್ನು ಕ್ರೂಢಿಕರಿಸಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ದಿನಪತ್ರಿಕೆಗಳಲ್ಲಿ ಪ್ರಚುರ ಪಡಿಸಬೇಕು. ಗ್ಯಾರಂಟಿ ಯೋಜನೆಗಳ ಕುರಿತು ಬಸ್ ನಿಲ್ದಾಣಗಳಲ್ಲಿ ಆಡಿಯೋ ಹಾಗೂ ವಿಡಿಯೋ ಜಿಂಗಲ್ಸ್‍ಗಳನ್ನು ಪ್ರದರ್ಶಿಸಲು ಕ್ರಮಕೈಗೊಳ್ಳಬೇಕು.
ಗೃಹಜ್ಯೋತಿ ಯೋಜನೆ ಫಲಾನುಭವಿಗಳ ವಿವರ ಹಾಗೂ ಯೋಜನೆಯಡಿ ಇದರವರೆಗೂ ಸರ್ಕಾರದಿಂದ ಭರಿಸಿರುವ ಒಟ್ಟು ಮೊತ್ತದ ವಿವರಗಳನ್ನು ಪ್ರತಿ ಬೆಸ್ಕಾಂ ಕಚೇರಿಗಳ ಸೂಚನಾ ಫಲಕಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕು. ಇದರೊಂದಿಗೆ ಬೆಸ್ಕಾಂ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಕೂಡ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
ಯುವನಿಧಿ ಯೋಜನೆಯು ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಜಿಲ್ಲೆಯ ಎಲ್ಲಾ ಪದವಿ ಹಾಗೂ ಡಿಪ್ಲೋಮೋ ಕಾಲೇಜುಗಳಲ್ಲಿ ಜಾಗೃತಿ ಆಂದೋಲನ ಏರ್ಪಡಿಸಬೇಕು. ಹೆಚ್ಚು ಯುವಕರು ಯುವನಿಧಿಯ ಸೌಲಭ್ಯ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

