ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಂದೋಬಸ್ತ್ ಗಾಗಿ 18 ಕಂಪನಿ ಕೇಂದ್ರಪಡೆಗಳು ರಾಜ್ಯಕ್ಕೆ ಆಗಮಿಸಿವೆ. ಸಿಆರ್ಪಿಎಫ್, ಸಿಐಎಸ್‌ಎಫ್ ಹಾಗೂ ಬಿಎಸ್‌ಎಫ್ ಪಡೆಗಳು, ಮೂರೂ ಕ್ಷೇತ್ರಗಳಲ್ಲೂ ಸ್ಥಳೀಯ ಪೊಲೀಸರ ಜೊತೆ ಪಥಸಂಚಲನ ನಡೆಸಿವೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 5 ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 5 ಕಂಪನಿ ಕೇಂದ್ರಪಡೆಗಳನ್ನು ಸ್ಥಳೀಯ ಪೊಲೀಸರ ಜೊತೆ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ತೀವ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೇಳಲಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 8 ಕಂಪನಿ ಕೇಂದ್ರಪಡೆಗಳು ಬಂದಿವೆ. ನಿನ್ನೆ ಕೇಂದ್ರಪಡೆಗಳು ಸ್ಥಳೀಯ ಪೊಲೀಸರ ಜೊತೆ ಕೆಲವು ಪ್ರದೇಶಗಳಲ್ಲಿ ಪಥಸಂಚಲನ ನಡೆಸಿವೆ.
ರಾಮನಗರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈಗಾಗಲೇ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತಪ್ರಚಾರ ಆರಂಭವಾಗಿದ್ದು, ಯಾವುದೇ ಸಣ್ಣ ಘಟನೆಗಳೂ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

