Breaking News

ಬೀದರ್ ನಲ್ಲಿ ಬೀದಿ ದೀಪಗಳಿಲ್ಲದೇ ಬಡವಾದ ಮಹಾನಗರದ ಪ್ರಮುಖ ರಸ್ತೆಗಳು

ಬೀದರ್‌: ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವ ಪಡೆದಿರುವ ಬೀದರ್‌ ಮಹಾನಗರದ ಪ್ರಮುಖ ರಸ್ತೆಗಳು ಬೀದಿ ದೀಪಗಳಿಲ್ಲದೆ ಬಡವಾಗಿವೆ.
ಬೀದರ್‌ ಶಾಸಕರೂ ಆದ ಪೌರಾಡಳಿತ ಸಚಿವ ರಹೀಂ ಖಾನ್‌ ಅವರ ತವರಿನ ರಸ್ತೆಗಳೇ ಅಂಧಕಾರದಲ್ಲಿ ಮುಳುಗಿವೆ. ಜನ ವಾಹನಗಳ ಬೆಳಕಿನ ಆಸರೆಯಲ್ಲಿ ಓಡಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.
ನಗರದ ನೌಬಾದ್‌ ಬಸವೇಶ್ವರ ವೃತ್ತದಿಂದ ಆರ್‌ಟಿಒ ಕಚೇರಿ ವರೆಗಿನ ಬೀದರ್‌-ನಾಂದೇಡ್‌ ಮುಖ್ಯರಸ್ತೆಯ ಬೀದಿದೀಪಗಳು ಹಾಳಾಗಿ ಅನೇಕ ತಿಂಗಳುಗಳಾಗಿವೆ. ಇಡೀ ಭಾಗ ಅಂಧಕಾರದಲ್ಲಿ ಮುಳುಗಿದೆ. ಇತ್ತೀಚೆಗೆ ರಸ್ತೆ ಅಭಿವೃದ್ಧಿಗೆ ಮಣ್ಣು ತಂದು ಸುರಿಯಲಾಗಿದ್ದು, ದೂಳಿನಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಗುರುದ್ವಾರದಿಂದ ಜನವಾಡ ರಸ್ತೆಗೆ ಸಂಪರ್ಕಿಸುವ ರಸ್ತೆಯೂ ಕತ್ತಲಲ್ಲಿ ಮುಳುಗಿದೆ. ಚಿದ್ರಿ ರಿಂಗ್‌ರೋಡ್‌ನಿಂದ ಮೈಲೂರ್‌ ವರೆಗೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೊಮಗೊಂಡೇಶ್ವರ ವೃತ್ತದಿಂದ ಚಿಟ್ಟಾ ಕ್ರಾಸ್‌ ವರೆಗೆ ಹಲವೆಡೆ ಬೀದಿ ದೀಪಗಳು ಕೆಟ್ಟು ಹೋಗಿವೆ. ಮರಗಳು ದಟ್ಟವಾಗಿ ಬೆಳೆದಿರುವುದರಿಂದ ಅವುಗಳ ನಡುವೆ ಮರೆಯಾಗಿ, ಬೆಳಕು ಹರಿಯುತ್ತಿಲ್ಲ. ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಇರುವ ಭಾಗದ ಮುಖ್ಯರಸ್ತೆಗಳಿಗೆ ಇತ್ತೀಚೆಗೆ ಹೊಸದಾಗಿ ವಿದ್ಯುತ್‌ ಕಂಬ, ದೀಪಗಳನ್ನು ಅಳವಡಿಸಲಾಗಿದೆ. ಗಣ್ಯರು, ಹೊರಗಿನವರು ಈ ಭಾಗದಲ್ಲಿ ಹೆಚ್ಚಾಗಿ ಓಡಾಡುವುದರಿಂದ ಅವುಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಈ ಭಾಗ ನೋಡಿದವರೂ ಇಡೀ ನಗರ ಇದೇ ರೀತಿ ಸ್ವಚ್ಛ, ಸುಂದರ, ಬೆಳಕಿನಿಂದ ಕಂಗೊಳಿಸುತ್ತಿರಬಹುದು ಎಂದು ಭಾವಿಸಬಹುದು. ಆದರೆ, ಪರಿಸ್ಥಿತಿ ಹಾಗಿಲ್ಲ. ಇತರೆ ಭಾಗಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
2008-09ರಲ್ಲಿ ನಗರದ ಪ್ರಮುಖ ರಸ್ತೆಗಳು ದ್ವಿಪಥವಾಗಿ ಮೇಲ್ದರ್ಜೆಗೇರಿಸಿದಾಗ ಹೊಸದಾಗಿ ವಿದ್ಯುತ್‌ ಕಂಬ, ದೀಪಗಳನ್ನು ಅಳವಡಿಸಲಾಗಿತ್ತು. ಕೆಲವು ವರ್ಷ ಉತ್ತಮ ಸ್ಥಿತಿಯಲ್ಲೇ ಇದ್ದವು. ಆದರೆ, ಇತ್ತೀಚಿನ ಕೆಲವು ತಿಂಗಳಿಂದ ಅವುಗಳನ್ನು ಕಡೆಗಣಿಸಲಾಗಿದೆ. ಎಲ್ಲೆಲ್ಲಿ ವಿದ್ಯುತ್‌ ದೀಪಗಳು ಹಾಳಾಗಿವೆಯೋ ಅವುಗಳನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎನ್ನುವುದು ಸಾರ್ವಜನಿಕರ ದೂರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *