Breaking News

ವಿಶ್ವದ ಸುಂದರ ಸಂವಿಧಾನ ನಮ್ಮದು; ನ್ಯಾಯಾಂಗವು ಸದಾ ಕಾಲ ಸಂವಿಧಾನದ ಶ್ರೇಷ್ಠತೆಯನ್ನು ರಕ್ಷಿಸುತ್ತದೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ

ಧಾರವಾಡ : ಇಂದಿನ ಜಾಗತಿಕ ಬದಲಾವಣೆ, ಬೇರೆ ದೇಶಗಳ ಆಡಳಿತ, ಅಲ್ಲಿನ ನಾಗರಿಕ ಹಕ್ಕು, ಸ್ವಾತಂತ್ರ್ಯಗಳನ್ನು ಅವಲೋಕಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಎದ್ದು ಕಾಣುತ್ತದೆ. ನಮ್ಮ ಸಂವಿಧಾನ ವಿಶ್ವದ ಸುಂದರ ಸಂವಿಧಾನವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಧಾರವಾಡ ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಿಗೆ ಆಯೋಜಿಸಿದ್ದ ಒಂದು ದಿನದ ಪ್ರವೇಶ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ನಾವು ಪ್ರತಿನಿತ್ಯ ಜೀವನದಲ್ಲಿ ಸಂವಿಧಾನದ ಆಶಯಗಳನ್ನೇ ಅಳವಡಿಸಿಕೊಂಡು, ಆಚರಿಸುತ್ತೇವೆ. ಸಂವಿಧಾನ ಪೀಠಿಕೆಯ ಪ್ರತಿ ಪದವು ಮುಖ್ಯವಾಗಿದೆ. ಸಂವಿಧಾನ ಪ್ರಸ್ತಾವನೆಗೆ ಸೇರಿಸಿರುವ ಪದ ತೆಗೆಯದಿರುವ ಕುರಿತು ಸರ್ವೋಚ್ಛ ನ್ಯಾಯಾಲಯ ಇಚೆಗೆ ನೀಡಿರುವ ತೀರ್ಪು ಸಂವಿಧಾನದ ಮಹತ್ವ, ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.
ವಿಶ್ವದ ಬೇರೆ ದೇಶಗಳ ಸಂವಿಧಾನಗಳನ್ನು ನೋಡಿದಾಗ, ನಮ್ಮ ಸಂವಿಧಾನ ಮೇಲ್ಪಂಕ್ತಿಯಾಗಿದೆ. ಸಂವಿಧಾನದ ಆಶಯಕ್ಕೆ ದಕ್ಕೆ ಬಂದಾಗ ನ್ಯಾಯಾಂಗ ಅದರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ ಅವರು ಸೇರಿದಂತೆ ಎಲ್ಲ ಮಹನೀಯರನ್ನು ನಾವು ಸ್ಮರಿಸಬೇಕು ಎಂದು ಅವರು ತಿಳಿಸಿದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾಳಜಿಯಿಂದ ಜನರಿಗೆ ನ್ಯಾಯಾಂಗದ ಸೇವೆಗಳನ್ನು ಮುಟ್ಟಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ನ್ಯಾಯಾಂಗದ ಕಾರ್ಯಗಳಲ್ಲಿ ಸ್ವಯಂ ಸೇವಕರಿಗೆ, ಆಸಕ್ತರಿಗೆ ಅವಕಾಶವಾಗಿದೆ. ನಿರ್ಗತಿಕರಿಗೆ, ಬಡವರಿಗೆ, ಅರ್ಹರಿಗೆ ನ್ಯಾಯಾಂಗದ ಸೇವೆಗಳನ್ನು ತಲುಪಿಸಬೇಕು. ಮತ್ತು ಸಾರ್ವಜನಿಕರಲ್ಲಿ ಕಾನೂನುಗಳ ಅರಿವು ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎ.ಎ.ಮುಗದುಮ್, ಸದಸ್ಯರಾದ ವಿ.ಡಿ.ಕಾಮರೆಡ್ಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಜಿ. ಅಮೋಘಿಮಠ, ಎಸ್.ಪಿ. ಕಚೇರಿ ಕಾನೂನು ಅಧಿಕಾರಿ ಸ್ಮಿತಾ ಆರ್.ಗಿರಗಾವಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಹಾನಗರ ಪೊಲೀಸ್ ಆಯುಕ್ತಾಲಯದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಟಿ. ವೇದಿಕೆಯಲ್ಲಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅಪರಾಧ ಕಾನೂನು ಕುರಿತು ಪ್ರಧಾನ ಸರಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅರೇ ಕಾನೂನು ಸ್ವಯಂ ಸೇವಕರ ಪಾತ್ರ ಹಾಗೂ ಕರ್ತವ್ಯಗಳ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಮಧ್ಯಸ್ಥಿಕೆ ಮತ್ತು ಲೋಕ ಅದಾಲತ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ.ಶಶಿರೇಖಾ ಮಾಳಗಿ, 144- ಬಿ.ಎನ್.ಎಸ್.ಎಸ್ ಜೀವನಾಂಶ ಕಾಯ್ದೆ ಮತ್ತು 85- ಬಿ.ಎನ್.ಎಸ್-ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ನ್ಯಾಯಾವಾದಿ ರಾಜೇಶ ನಾವಲಗಿಮಠ, ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ನೂರಜಹಾನ್ ಕಿಲ್ಲೇದಾರ ಮತ್ತು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಕಾನೂನು ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ ಎಮ್.ಎ ಅವರು ವಿಶೇಷ ಉಪನ್ಯಾಸಗಳನ್ನು ನೀಡಿದರು. ವಿವಿಧ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆ ಮತ್ತು ಸ್ವಯಂ ಪ್ರೇರಣೆಯಿಂದ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಾಗಿ ಸೇವೆಗೆ ಸೇರಿರುವ 150 ಕ್ಕೂ ಹೆಚ್ಚು ಜನರಿಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *