ಹುಬ್ಬಳ್ಳಿ: ರೈತರು ಉತ್ತಿ, ಬಿತ್ತಿ ಬೆಳೆ ತೆಗೆದಾಗ ಮಾತ್ರ ಎಲ್ಲರೂ ಸುಖವಾಗಿರಲು ಸಾಧ್ಯ. ಅಂತಹ ಅನ್ನದಾತರಿಗಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು.
ಇಲ್ಲಿನ ನವನಗರದ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಬಡವರ ಪಾಲಿನ ಕಲ್ಪವೃಕ್ಷವಾಗಿದೆ.
ಗೃಹಜ್ಯೋತಿ ಯೋಜನೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಭರವಸೆ ನೀಡಿದರು.
ಹೆಸ್ಕಾಂ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ, ಅಲ್ಲಿನ ಕುಂದು -ಕೊರತೆಗಳನ್ನು ನೀಗಿಸುವ ಜೊತೆಗೆ ಪಕ್ಷಕ್ಕೆ ಹೆಸರು ತಂದುಕೊಡಲು ಶ್ರಮಿಸುತ್ತೇನೆ. ಹೆಸ್ಕಾಂ ಇಲಾಖೆಯಲ್ಲಿನ ಸೋರಿಕೆ ತಡೆಗಟ್ಟುವಲ್ಲಿ ಮುತವರ್ಜಿ ವಹಿಸಲಾಗುವುದು. ಅವ್ಯವಹಾರ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸವಣೂರಿನ ದೊಡ್ಡ ಹುಣಸೆ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಅಜ್ಜಂಪೀರ ಖಾದ್ರಿ ಅವರು ಯಾವತ್ತೂ ಜಾತಿ, ಧರ್ಮಕ್ಕೆ ಅಂಟಿಕೊಂಡವರಲ್ಲ. ಜಾತ್ಯಾತೀತವಾಗಿ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಕತ್ತಲಾದ ಮನೆಗೆ ಬೆಳಕು ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅದರಲ್ಲಿ ಯಶಸ್ವಿ ಕೂಡ ಆಗಲಿದ್ದಾರೆ ಎಂದರು.
ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿದರು. ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಜಮೀರ್ ಅಹ್ಮದ್‌ಖಾನ್, ಶಾಸಕರಾದ ಶ್ರೀನಿವಾಸ ಮಾನೆ, ಯಾಸೀರ್ ಖಾನ್ ಪಠಾಣ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ.ಸನದಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಧರ್ಮ ಗುರುಗಳಾದ ಸಯ್ಯದ್ ತಾಜುದ್ದೀನ್ ಖಾದ್ರಿ, ಶಹಜಾದೆ ಪೀರ ಖಾದ್ರಿ, ಸಯ್ಯದ ಅಜ್ಮತ್, ಮೌಲಾನಾ ಸೈಯದ ನಿಸಾರ ಅಹ್ಮದ್ ಹಾಗೂ ಹೆಸ್ಕಾಂ ಅಧಿಕಾರಿಗಳು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





