ಹುಬ್ಬಳ್ಳಿ: ಕಲಾ ಸುಜಯ ಸಂಸ್ಥೆಯ ವತಿಯಿಂದ ಭಾರತೀಯ ಶಾಸ್ತ್ರೀಯ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಲಾವಸಂತ ಕಾರ್ಯಕ್ರಮವನ್ನು ಇದೇ 27 ರಂದು ಸಂಜೆ 5-30ಕ್ಕೆ ಇಲ್ಲಿನ ಜೆಸಿ ನಗರದ ಸರಸ್ವತಿ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸುಜಯ ಸಂಸ್ಥೆಯ ಮುಖ್ಯಸ್ಥರಾದ ಸುಜಯ ಶಾನಭಾಗ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಶಾಸ್ತ್ರೀಯ ಸಂಸ್ಕೃತಿಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಭಾರತೀಯ ಶಾಸ್ತ್ರೀಯ ಕಲೆಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ ದಿ.ಡಾ.ಪವನಭಟ್ ಅವರಿಗೆ ಸಮರ್ಪಿತವಾಗಲಿದೆ ಎಂದರು. ಡಾ.ಪವನಭಟ್ ಅವರ ಭಾಗವತ ಉಪನ್ಯಾಸಗಳನ್ನಾಧರಿಸಿ ನೃತ್ಯ ನಾಟಕ” ಸಂಭವಾಮಿ ಯುಗೇ ಯುಗೇ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿದೆ ನೃತ್ಯ ರೂಪಕದಲ್ಲಿ ನಾಲ್ಕು ವರ್ಷದ ಕಲಾಪ್ರತಿಭೆಯಿಂದ ಹಿಡಿದು 55 ವರ್ಷದ ವರೆಗಿನ ಕಲಾ ಪ್ರತಿಭೆಗಳು ಪ್ರದರ್ಶನದಲ್ಲಿ ಅಭಿನಯಿಸಲಿದ್ದಾರೆ ಎಂದು ಅವರು ಹೇಳಿದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯಂ ಗುರುಗಳಾದ ಮಂದಾಕಿನಿ ಉಡುಪಿ, ಕರ್ನಾಟಕ ಶಾಸ್ತ್ರೀಯ ಗಾಯಕಿ ಹೇಮಲತಾ ಸಂಪತ್ತ ಮತ್ತು ಶಾಸ್ತ್ರೀಯ ಸಂಗೀತ ಪೋಷಕರಾದ ಸುನಾದ ಗಾನಸುಧಾ ಅವರಿಗೆ ಜೀವಮಾನದ ಸಾಧನೆಗಾಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು. ಸಂಸ್ಕೃತ ವಿದ್ವಾಂಸರಾದ ಕಂಠಪಲ್ಲಿ ಸಮೀರ್ ಆಚಾರ್ಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ಕಲಾ ಸುಜಯ ಸಂಸ್ಥೆಯು ಕೊಂಕಣಿ ಚಿತ್ರರಂಗದಲ್ಲಿ ಉತ್ತಮ ಅಭಿನಯ ಎಂಬುವಂತ ಗೌರವದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಂದನಾ ಶಾನಭಾಗ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





