Breaking News

2023 ರಲ್ಲಿ ಭಾರತದಿಂದ ₹21 ಸಾವಿರ ಕೋಟಿ ರಕ್ಷಣಾ ಉಪಕರಣಗಳ ರಫ್ತು: ಡಾ.ಜಿ.ಸತೀಶ್ ರೆಡ್ಡಿ

ಆನೇಕಲ್: ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಭಾರತ ಸ್ವಾವಲಂಬಿಯಾಗುತ್ತಿದೆ. 2023ನೇ ಸಾಲಿನಲ್ಲಿ ₹21 ಸಾವಿರ ಕೋಟಿ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ₹50 ಸಾವಿರ ಕೋಟಿ ಗುರಿ ಹೊಂದಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ನಾಯಕನಾಗಬೇಕು ಎಂಬುದು ಗುರಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಸಲಹೆಗಾರ, ಡಿಆರ್‌ಡಿಓ ಆಡಳಿತ ಮಂಡಳಿ ಅಧ್ಯಕ್ಷ ಡಾ.ಜಿ.ಸತೀಶ್‌ ರೆಡ್ಡಿ ಹೇಳಿದರು.
ಅಲಯನ್ಸ್‌ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಮಾತನಾಡಿ, ಸ್ಟಾರ್ಟ್‌ ಅಪ್‌ಗೆ ಇತ್ತೀದಿನ ದಿನಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹೊಸ ಹೊಸ ಸಂಶೋಧನೆಗಳು, ನವೀನ ಮಾರುಕಟ್ಟೆ ಗ್ರಾಹಕರನ್ನು ಸೆಳೆಯುತ್ತಿದೆ ಎಂದರು.
ದೇಶದಲ್ಲಿ ₹4.38 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. 14 ಲಕ್ಷ ಮಂದಿ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಪದವಿ ಪಡೆಯುತ್ತಿದ್ದಾರೆ. ಪಿಎಚ್‌ಡಿಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ಐಐಟಿಗಳಲ್ಲಿ ಅಧ್ಯಯನ ನಡೆಸುವ ಶೇ.75ರಷ್ಟು ಮಂದಿ ವಿದೇಶಗಳಿಗೆ ತೆರಳುತ್ತಾರೆ. ವಿದೇಶಗಳಿಗೆ ತೆರಳುವ ಬದಲಿಗೆ ಭಾರತದ ಅಭಿವೃದ್ಧಿಗೆ ನಿಮ್ಮ ಶಕ್ತಿಯನ್ನು ಮೀಸಲಿಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಗೋವಾ ರಾಜ್ಯದ ರಾಜ್ಯಪಾಲ ಎಸ್‌.ಶ್ರೀಧರನ್‌ ಪಿಳ್ಳೈ, ವಿದ್ಯಾರ್ಥಿಗಳು ಪಡೆದ ಪದವಿ ಸಮಾಜದ ಅಭಿವೃದ್ಧಿಗೆ ಉಪಯೋಗವಾಗಬೇಕು. ಪದವೀಧರರು ಉಜ್ವಲ ಭವಿಷ್ಯದೊಂದಿಗೆ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಬೇಕು ಎಂದರು.
ಕರ್ನಾಟಕ ಐಟಿ ಬಿಟಿ ಕ್ಷೇತ್ರದಲ್ಲಿ ದೇಶದಲ್ಲಿಯೇ ಉನ್ನತ ಸಾಧನೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.
ಘಟಿಕೋತ್ಸವದಲ್ಲಿ 1,145 ಮಂದಿ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಸ್ವೀಕರಿಸಿದರು.
ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಿದ್ಯಾಲಯ ಕುಲಪತಿ ಪ್ರೇಮಾನಂದ್‌ ಶೆಟ್ಟಿ, ಸಹ ಕುಲಪತಿ ಅಭಯ್‌ ಛೆಬ್ಬಿ, ಉಪಕುಲಪತಿ ಡಾ.ಪ್ರೇಸ್ಲಿ ಶಾನ್‌, ರಿಜಿಸ್ಟರ್‌ ಜನರಲ್‌ ಸುರೇಖಾ ಶೆಟ್ಟಿ, ರೆಜಿಸ್ಟರ್‌ ವಿಶ್ವನಾಥಯ್ಯ ಮಠಂ ಇದ್ದರು.
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *