Breaking News

ವಿಶ್ವದಲ್ಲೇ ಅತೀ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ: ಭಾರತ, ಬಾಂಗ್ಲಾದೇಶ ಕಳವಳ

ಬೀಜಿಂಗ್‌: ವಿಶ್ವದಲ್ಲೇ ಅತಿ ದೊಡ್ಡದಾದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ ನೀಡಿದೆ. ಭೂಮಿ ಮೇಲಿನ ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು, 137 ಬಿಲಿಯನ್‌ ಡಾಲರ್‌ (₹11.67 ಲಕ್ಷ ಕೋಟಿ) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬ್ರಹ್ಮಪುತ್ರ ನದಿಗೆ ಈ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿವೆ.
ಚೀನಾ ಸರ್ಕಾರವು ಯರ್ಲಿಂಗ್‌ ಝಿಂಗ್ಬೊ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಜಲವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದೆ’ ಎಂದು ಅಧಿಕಾರಿಯೊಬ್ಬರ ಹೇಳಿಕೆಯೊಂದನ್ನು ಉಲ್ಲೇಖಿಸಿ ‘ಕ್ಸಿನುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತದ ಅರುಣಾಚಲ ಪ್ರದೇಶಕ್ಕೆ ಪ್ರವೇಶಕ್ಕೂ ಮುನ್ನ ನದಿಯು ದೊಡ್ಡದಾಗಿ ಯು-ಟರ್ನ್‌ ಪಡೆಯುವ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣಗೊಳ್ಳಲಿದೆ. ಭೂಮಿ ಮೇಲೆ ಇದುವರೆಗೂ ನಿರ್ಮಾಣಗೊಂಡ ಮೂಲಸೌಕರ್ಯ ಯೋಜನೆಗಳಲ್ಲಿಯೇ ಗರಿಷ್ಠ ವೆಚ್ಚದ್ದು ಇದಾಗಿದೆ. ನಿರ್ಮಾಣ ಪೂರ್ಣಗೊಂಡ ಬಳಿಕ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಖ್ಯಾತಿಗೂ ಪಾತ್ರವಾಗಲಿದೆ’ ಎಂದು ಹಾಂಗ್‌ಕಾಂಗ್‌ ಮೂಲದ ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್’ ವರದಿ ಮಾಡಿದೆ.
2015ರಲ್ಲಿ ಟಿಬೆಟ್‌ನಲ್ಲಿ ಚೀನಾ ನಿರ್ಮಿಸಿದ್ದ ಅತ್ಯಂತ ದೊಡ್ಡ ಅಣೆಕಟ್ಟಾದ ‘ಜಾಮ್‌ ಜಲವಿದ್ಯುತ್‌ ಕೇಂದ್ರ’ವು ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ.
ಭಾರತ ಕಳವಳ:
ನದಿಯಲ್ಲಿ ಹರಿಯುವ ನೀರಿನ ಮೇಲೆ ಚೀನಾ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತ ಕೂಡ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *