ಹುಬ್ಬಳ್ಳಿ: ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲು ನಗರದ ಜನರು ಪೂರ್ವಸಿದ್ಧತೆ ನಡೆಸುತ್ತಿದ್ದರೆ, ಶಾಂತಿಯುತ ಆಚರಣೆಗೆ ಪೊಲೀಸ್ ಇಲಾಖೆ ಮನರಂಜನೆ ಕಾರ್ಯಕ್ರಮಗಳನ್ನು ನಡೆಸುವ ಹೋಟೆಲ್‌ಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲು ಮುಂದಾಗಿದೆ.
ಕೆಲವು ಪ್ರತಿಷ್ಠಿತ ಹೋಟೆಲ್‌ಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಹಕರನ್ನು ಸೆಳೆಯಲು ಸಿದ್ಧತೆ ನಡೆಸಿವೆ. ಯುವಕರನ್ನು ಆಕರ್ಷಿಸಲು ಡಿಜೆ, ಮ್ಯೂಸಿಕ್ ಪಾರ್ಟಿಗಳನ್ನು ಆಯೋಜಿಸಿ, ಗಾಯಕರನ್ನು ಕರೆಸಿ ಸಂಗೀತ ರಾತ್ರಿ ನಡೆಸಲು ತೀರ್ಮಾನಿಸಿವೆ. ಬಹುತೇಕ ಹೋಟೆಲ್‌ಗಳು ಆಲಂಕಾರಿಕ ವಿದ್ಯುದ್ದೀಪಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ. ಮನರಂಜನೆ ಕಾರ್ಯಕ್ರಮಗಳಿಗೆ ಆಕ್ಷೇಪವಿಲ್ಲ, ವರ್ಷಾಚರಣೆ ನೆಪದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮ ಆಯೋಜಿಸುವ ಹೋಟೆಲ್‌ಗಳು ಆಂತರಿಕ ಭದ್ರತೆ ಮಾಡಿಕೊಳ್ಳಬೇಕು. ಕಾರ್ಯಕ್ರಮ ನಡೆಸುವ ಹಾಗೂ ಸಾರ್ವಜನಿಕರು ಬಂದು, ಹೋಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಗಲಾಟೆಯೇನಾದರೂ ನಡೆದರೆ ಹೋಟೆಲ್ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ರಾತ್ರಿ 10ರವರೆಗೆ ಮಾತ್ರ ಡಿಜೆ ಬಳಕೆ ಅವಕಾಶ. ಈ ನಿಟ್ಟಿನಲ್ಲಿ ಹೋಟೆಲ್ ಮಾಲೀಕರನ್ನು ಕರೆಸಿ ಚರ್ಚಿಸುವುದಾಗಿ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ, ಆಯಾ ಠಾಣಾ ಇನ್‌ಸ್ಪೆಕ್ಟರ್‌ಗಳಿಗೆ ಸಲಹೆ, ಸೂಚನೆ ನೀಡಲಾಗಿದೆ. ರೌಡಿಗಳ ಮಾಹಿತಿ ಪದೇಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿವರಗಳನ್ನು ಸಂಗ್ರಹಿಸಿ, ಎಚ್ಚರಿಕೆ ನೀಡಲಾಗಿದೆ. ಕೋಮು ಭಾವನೆಗೆ ಪ್ರಚೋದನೆ ನೀಡುವವರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಬರಹ, ಚಿತ್ರಗಳನ್ನು ಪೋಸ್ಟ್ ಮಾಡುವವರ ಮೇಲೆ ನಿಗಾ ಇಡಲು ವಿಶೇಷ ತಂಡ ರಚಿಸಲಾಗಿದೆ. ಅಲ್ಲದೆ, ಗುಪ್ತ ಮಾಹಿತಿ ಸಂಗ್ರಹಿಸಲು ಸಹ ವಿಶೇಷ ತಂಡ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.
ನಗರದ ಪ್ರಮುಖ ಸ್ಥಳಗಳಲ್ಲಿ, ವೃತ್ತಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ಮಾಡಲಾಗುವುದು. ಅಗತ್ಯವಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವದು. ಭಾನುವಾರ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು.
ವರ್ಷದ ಕೊನೆಯಲ್ಲಿ ಇದ್ದು, ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೆಲವರು ಅಪರಾಧ ನಡೆಸಲು ತೀರ್ಮಾನಿಸಿರುತ್ತಾರೆ. ಕೊನೆಯ ಎರಡು-ಮೂರು ದಿನಗಳಲ್ಲಿ ದ್ವೇಷ ತೀರಿಸಿಕೊಳ್ಳಲು ಯೋಜನೆ ರೂಪಿಸುತ್ತಾರೆ. ಅದಕ್ಕಾಗಿ ಪಾರ್ಟಿ ಅಥವಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳ ಗೊತ್ತುಪಡಿಸಿಕೊಂಡಿರುತ್ತಾರೆ. ಅದ್ಯಾವುದಕ್ಕೂ ಇಲಾಖೆ ಅವಕಾಶ ನಿಡುವುದಿಲ್ಲ. ಹಾಗೇನಾದರೂ ನಡೆದರೆ ಮುಲಾಜಿಲ್ಲದೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಹೊಸ ವರ್ಷಾಚರಣೆ ಎಂದು ಕಾನೂನು ನಿಯಮದಲ್ಲಿ ಸಡಿಲಿಕೆಯಿಲ್ಲ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು. ಪಾರ್ಟಿಗೆ ಹಾಜರಾಗಿ ಮನೆಗೆ ಹೋಗುವವರಿಂದ ಆಟೊ ಚಾಲಕರು ಹೆಚ್ಚಿಗೆ ಹಣ ವಸೂಲಿ ಮಾಡಬಾರದು. ಠಾಣಾ ವ್ಯಾಪ್ತಿಯಲ್ಲಿ ಅವರನ್ನು ಕರೆಸಿ ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಅಬಕಾರಿ ನಿಯಮಾವಳಿ ಪ್ರಕಾರ ಅನುಮತಿ ಇರುವಷ್ಟು ಸಮಯ ಮಾತ್ರ ರಾತ್ರಿ ವೇಳೆ ಮದ್ಯದ ಅಂಗಡಿಗಳು ತೆರೆದಿರಬೇಕು. ಕಾನೂನು ಉಲ್ಲಂಘಿಸುವಂತಿಲ್ಲ. ಮಹಿಳೆಯರಿಗೆ ಹುಡುಗಿಯರಿಗೆ ಯಾರಾದರೂ ತೊಂದರೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

