Breaking News

ಇಂಟರ್ ನ್ಯಾಷನಲ್ ಬ್ಯಾಟರಿ ಕಂಪನಿಯ ಗಿಗಾ ಫ್ಯಾಕ್ಟರಿಯ ಸ್ಥಳೀಯ ಘಟಕಕ್ಕೆ ಶಂಕುಸ್ಥಾಪನೆ

ಬೆಂಗಳೂರು : ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೇಕಾಗುವ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪೆನಿಯ (ಐಬಿಸಿ) ಗಿಗಾ ಫ್ಯಾಕ್ಟರಿಯ ಸ್ಥಳೀಯ ಘಟಕಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಂಪನಿಯು ತಯಾರಿಸುವ ಬ್ಯಾಟರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಹಾನಗರ ಗ್ಯಾಸ್ ಲಿಮಿಟೆಡ್ ಜತೆ ಸೇರಿ ಐಬಿಸಿ ಈ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ. ಈ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್, `ದೇವನಹಳ್ಳಿಯ ಕೆಐಎಡಿಬಿ ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉತ್ಪಾದನಾ ಘಟಕಕ್ಕೆ ಕಂಪೆನಿಯು ಮೊದಲ ಹಂತದಲ್ಲಿ 390ಕೋಟಿ ರೂ. ಹೂಡಿಕೆ ಮಾಡಲಿದ್ದು, 300 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಉತ್ಪಾದಿಸಲಾಗುವ ಬ್ಯಾಟರಿಗಳ ಪೈಕಿ ಶೇ.20ರಷ್ಟನ್ನು ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ರಫ್ತು ಮಾಡಲಾಗುವುದು’ ಎಂದರು.
ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಐಬಿಸಿ ಘಟಕಕ್ಕೆ 10 ಎಕರೆ ಜಾಗ ಕೊಟ್ಟಿದ್ದು, ಫಾಕ್ಸ್‍ಕಾನ್ ಸಂಸ್ಥೆಯ ಸಮೀಪದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಒಂಭತ್ತು ತಿಂಗಳಲ್ಲಿ ಈ ಘಟಕವು ಕಾರ್ಯಾಚರಣೆ ಆರಂಭಿಸಲಿದ್ದು, ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ, ಇಲ್ಲಿಂದಲೇ ದೇಶ-ವಿದೇಶಗಳಿಗೂ ಕಳುಹಿಸಿ ಕೊಡಲಿದೆ ಎಂದು ಅವರು ಮಾಹಿತಿ ನೀಡಿದರು.
ಸದ್ಯಕ್ಕೆ ಐಬಿಸಿ ಕಂಪೆನಿಯು ದಕ್ಷಿಣ ಕೊರಿಯಾದಲ್ಲಿ ಸೆಲ್ಸ್ ಉತ್ಪಾದಿಸಿ, ಅವುಗಳನ್ನು ಇಲ್ಲಿಗೆ ತಂದು ಪೂರ್ಣ ಪ್ರಮಾಣದ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಈ ಘಟಕ ಕಾರ್ಯಾರಂಭ ಆದ ನಂತರ ಇಲ್ಲೇ ಸೆಲ್‍ಗಳ ಉತ್ಪಾದನೆ ಆಗಲಿದೆ. ಇದು ದೇಶದಲ್ಲೇ ಮೊದಲ ಸೆಲ್ ಉತ್ಪಾದನಾ ಘಟಕವಾಗಲಿದೆ. ಮುಂಬರುವ ದಿನಗಳಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಜತೆಗೆ ಉಳಿದ ವಾಹನಗಳಿಗೂ ಇದು ಬ್ಯಾಟರಿ ಪೂರೈಸಲಿದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ಶಿಕ್ಷಣ ಹಾಗೂ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ತರಬೇತಿ ಪಡೆದ ಯುವ ಉದ್ಯಮಿಗಳು ಐಬಿಸಿ ಕಂಪನಿ ಸ್ಥಾಪಿಸಿ, ಬ್ಯಾಟರಿಗಳ ವಿನ್ಯಾಸ, ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದಾರೆ. ಹಾಗೆಯೇ ಭಾರತದ ಅಗತ್ಯಕ್ಕೆ ಹೊಂದುವ ಹಾಗೆ ವಿನ್ಯಾಸ ಮಾಡಿರುವುದು ಮೆಚ್ಚುವಂತಹದ್ದು ಎಂದು ಪಾಟೀಲ್ ಇದೇ ವೇಳೆ ಶ್ಲಾಘಿಸಿದರು
ಇದು ಭಾರತದಲ್ಲಿ ಇಂತಹ ಪ್ರಪ್ರಥಮ ಯೋಜನೆಯಾಗಿದೆ. ಇಲ್ಲಿ ರೆಟ್ರೋಫಿಟ್ ಬ್ಯಾಟರಿಗಳನ್ನು ಕೂಡ ತಯಾರಿಸಲಾಗುವುದು. ಇದರಿಂದ ರಾಜ್ಯದ ಆರ್ಥಿಕತೆಗೆ ಹೊಸ ಬಲ ಬರಲಿದ್ದು, ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದರು.
ನಾವು ಸುಸ್ಥಿರ, ತಂತ್ರಜ್ಞಾನಾಧಾರಿತ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಆರ್ಥಿಕತೆಯನ್ನು ಕಟ್ಟುವ ಗುರಿ ಇಟ್ಟುಕೊಂಡಿದ್ದೇವೆ. ಇನ್ನೊಂದೆಡೆಯಲ್ಲಿ, ಹಸಿರು ಇಂಧನ ಬಳಕೆಗೆ ಉತ್ತೇಜನ ಕೊಡುತ್ತಿದ್ದೇವೆ. ಐಬಿಸಿ ಗಿಗಾ ಫ್ಯಾಕ್ಟರಿಯು ಈ ಪರಿವರ್ತನೆಯ ಮೈಲುಗಲ್ಲಾಗಿದೆ. ಇದರಿಂದಾಗಿ ರಾಜ್ಯವು ಇಂಧನ ಕ್ಷೇತ್ರದ ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಐಬಿಸಿ ಸಿಇಒ ಪ್ರಿಯದರ್ಶಿ ಪಾಂಡಾ, ಸಿಎಸ್‍ಒ ಸುಂದರ್ ರಾಮಮೂರ್ತಿ, ಕುನಾಲ್ ಜೈನ್, ಜಾಸ್‍ಟೆಕ್ ಅಧ್ಯಕ್ಷ ಜೇಸನ್ ಚುಂಗ್, ಉಪಾಧ್ಯಕ್ಷ ಡ್ಯಾನಿ ಚುಂಗ್, ಮಹಾನಗರ್ ಗ್ಯಾಸ್ ಲಿ.ವ್ಯವಸ್ಥಾಪಕ ನಿರ್ದೇಶಕ ಆಶು ಸಿಂಘಾಲ್, ಡೆಪ್ಯುಟಿ ಎಂಡಿ ಸಂಜಯ್ ಸಿಂದೆ ಉಪಸ್ಥಿತರಿದ್ದರು.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *