Breaking News

ರಾಜ್ಯಾದ್ಯಂತ 400ಕ್ಕೂ ಅಧಿಕ ತೊಗರಿ ಕೇಂದ್ರಗಳ ಆರಂಭ: ಕ್ವಿಂಟಾಲ್ ಗೆ ಹೆಚ್ಚುವರಿ 450 ಘೋಷಣೆ; ಸಚಿವ ಶಿವಾನಂದ ಪಾಟೀಲ್

ವಿಜಯಪುರ: ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರೊಂದಿಗೆ ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಸಚಿವರು, ಒಟ್ಟು ಪ್ರತಿ ಕ್ರಿಂಟಾಲ್‌ಗೆ ಎಂಟು ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನಫೆಡ್‌ ಖರೀದಿ ಏಜನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತೊಗರಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ರೂ 8000 ಧಾರಣಿಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ ರೂ 5800 ಧಾರಣಿಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್‌ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ ರೂ 450 ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆ ಎಂದು ವಿವರಿಸಿದರು.
ಆಂಧ್ರದ ಜೋಳಕ್ಕೆ ತಡೆ: ಆಂಧ್ರಪ್ರದೇಶದ ಹೈಬ್ರಿಡ್‌ ಜೋಳವನ್ನು ರಾಜ್ಯದ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿರುವುದು ಗಮನಕ್ಕೆ ಬಂದಿದ್ದು, ಆಂಧ್ರದ ಜೋಳಕ್ಕೆ ಕಡಿವಾಣ ಹಾಕಲಾಗುವುದು ಎಂದು ಸಚಿವರು ಹೇಳಿದರು.
ಹೈಬ್ರಿಡ್‌ ಜೋಳಕ್ಕೆ ರೂ 3370 ಹಾಗೂ ಮಾಲದಂಡಿ ಜೋಳಕ್ಕೆ ರೂ 3400 ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಒಟ್ಟು ಐದು ಲಕ್ಷ ಕ್ವಿಂಟಾಲ್‌ ಖರೀದಿ ಮಾಡಲಾಗುವುದು. ಇದುವರೆಗೆ ಕೆಲವೇ ಕೆಲವು ಜಿಲ್ಲೆಗಳ ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಜೋಳ ಬೆಳೆಯುವ ಎಲ್ಲ ಜಿಲ್ಲೆಗಳಿಗೂ ಖರೀದಿ ಪ್ರಮಾಣವನ್ನು ಹಂಚಿಕೆ ಮಾಡಲಾಗುವುದು ಎಂದು ವಿವರಿಸಿದರು.
ಕಳಪೆ ಬಿತ್ತನೆ ಬೀಜ ಮತ್ತು ಕೀಟನಾಶಕ ಮಾರಾಟದ ದೂರುಗಳು ಹೆಚ್ಚಾಗಿದ್ದು, ಅಂತಹವರಿಗೆ ಶಿಕ್ಷೆ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *