Breaking News

ಪಂಚಮಸಾಲಿ ಮೀಸಲಾತಿಗಾಗಿ ಇನ್ಮೇಲೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ. ಮೀಸಲಾತಿ ಕೇಳುವುದೂ ಇಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಲಿಂಗಾಯತ ಸಮಾಜದವರ ಮೇಲೆ ಯಾರೂ ಕೂಡಾ ಈ ರೀತಿಯ ಹಲ್ಲೆ ಮಾಡಿರಲಿಲ್ಲ.
ಹಾಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಲು ಸರ್ಕಾರದ ಮುಂದೆ ಹೋಗುವುದಿಲ್ಲ. ಬದಲಿಗೆ ಜನರ ಮುಂದೆ ಹೋಗುವುದಾಗಿ ತಿಳಿಸಿದರು.
ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಶಾಂತಿಯುತ ಹೋರಾಟ ನಡೆಸಿದ ಸಂದರ್ಭದಲ್ಲಿ ಸರ್ಕಾರ ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಉದ್ದೇಶಪೂರ್ವಕವಾಗಿ ಪೊಲೀಸರಿಂದ ಹಲ್ಲೆ ನಡೆಸಲಾಗಿದೆ. ಘಟನೆ ನಡೆದ ನಂತರ ಈವರೆಗೆ ಕ್ಷಮಾಪಣೆ ಸಹ ಕೇಳಿಲ್ಲ. ಹಲ್ಲೆ ಮಾಡಿದಂತಹವರ ಮೇಲೆ ಯಾವುದೇ ಕ್ರಮವೂ ಆಗಿಲ್ಲ ಎಂದು ತಿಳಿಸಿದರು.
20 ವರ್ಷಗಳ ಕಾಲ ಇವರೇ ಮುಖ್ಯಮಂತ್ರಿಯಾಗಿ ಇರುವುದಿಲ್ಲ. ದೇವರ ದಯೆಯಿಂದ ಮುಂದೆ ಬೇರೆ ಮುಖ್ಯಮಂತ್ರಿಗಳು ಬರುತ್ತಾರೆ. ಅವರಲ್ಲಿ ನ್ಯಾಯ ಕೇಳುತ್ತೇವೆ. ಮತ್ತೆ ಈ ಸರ್ಕಾರದ ಮುಂದೆ ಹೋಗಿ ಮೀಸಲಾತಿ ಬಗ್ಗೆ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗಾಗಲೇ ಕೂಡಲ ಸಂಗಮದಿಂದ ಪ್ರತಿಜ್ಞಾ ಕ್ರಾಂತಿ ಅಭಿಯಾನ ನಡೆಸಲಾಗಿದೆ. 224 ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ, ರಾಜ್ಯ ಸರ್ಕಾರ ಸಮಾಜಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಲಾಠಿ, ಬೂಟಿನ ಏಟು ಕೊಟ್ಟವರಿಗೆ ಏನು ಉತ್ತರ ಕೊಡುತ್ತೀರಿ, ಮೀಸಲಾತಿ ಕೊಡುತ್ತೇವೆ ಎನ್ನುವವರಿಗೆ ಏನು ಉತ್ತರ ಕೊಡುತ್ತೀರಿ ಎಂದು ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು.
ಸಮಾಜದ ಮೇಲೆ ದೌರ್ಜನ್ಯ ಮಾಡಿದವರಿಗೆ ಆಶೀರ್ವಾದ ಮಾಡುತ್ತಿರೋ, ಇಲ್ಲ ಸಮಾಜಕ್ಕೆ ಪ್ರೀತಿ ಕೊಡುವವರಿಗೆ ಆಶೀರ್ವಾದ ಮಾಡುತ್ತಿರೋ ಎಂದು ಜನರ ಕೇಳುತ್ತೇವೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಶಾಂತಿಯುತ ಹೋರಾಟ ನಡೆಸಿದ ಸಂದರ್ಭದಲ್ಲಿ ಸರ್ಕಾರ ಸಮುದಾಯದವರ ಮೇಲೆ ನಡೆಸಿದ ದೌರ್ಜನ್ಯ, ಅಮಾನುಷ ಹಲ್ಲೆಯ ಬಗ್ಗೆ ಉಚ್ಚ ನ್ಯಾಯಾಲಯ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಸರ್ಕಾರಕ್ಕೆ ನೋಟಿಸ್ ಸಹ ಜಾರಿ ಮಾಡಲಾಗಿದೆ. ಯಾವುದೇ ಸರ್ಕಾರ ನಮ್ಮ ಸಮುದಾಯದವರ ಮೇಲೆ ಈ ರೀತಿ ದೌರ್ಜನ್ಯವೆಸಗಿರಲಿಲ್ಲ ಎಂದು ತಿಳಿಸಿದರು.
ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿಯವರು ಪಂಚಮಸಾಲಿ ಸಮಾಜಕ್ಕೆ ಉನ್ನತ ಸ್ಥಾನ ಕೊಡಬೇಕಿತ್ತು. ಈವರೆಗೆ ಕೊಟ್ಟಿಲ್ಲ. ಕೇವಲ ಮತಗಳಿಕೆ ಯಂತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪಕ್ಷ ಪರಿಗಣನೆಗೆ ತೆಗೆದುಕೊಂಡು ಒಳ್ಳೆಯ ಸ್ಥಾನಮಾನ ನೀಡಲಿ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎನ್ನುವ ಮೂಲಕ ಯತ್ನಾಳ್ ಪರ ಪರೋಕ್ಷವಾಗಿ ಬ್ಯಾಟ್ ಬೀಸಿದರು.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *