Breaking News

ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗಾಗಿ ರೈಲು ತಡೆಗೆ ಯತ್ನ

ಕಲಬುರಗಿ: ಹಲವು ದಶಕಗಳ ಬೇಡಿಕೆಯಾಗಿರುವ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆಗೆ ಆಗ್ರಹಿಸಿ ಇಂದು (ಜ.24) ಬೆಳಿಗ್ಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ (ಕೆಕೆಸಿಸಿಐ) ಸಂಸ್ಥೆ ನೇತೃತ್ವದಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ತಡೆಗೆ ಯತ್ನಿಸಲಾಯಿತು.
ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ರೈಲ್ವೇ ನಿಲ್ದಾಣದವರೆಗೆ ಸಾವಿರಾರು ಪ್ರತಿಭಟನಾಕಾರರು ರೈಲು ನಿಲ್ದಾಣಕ್ಕೆ ನುಗ್ಗಲು ಹೊರಟಾಗ ಕಲಬುರಗಿ ನಗರ ಪೊಲೀಸ್‌ರು ರೈಲು ನಿಲ್ದಾಣ ಮುಂಭಾಗದಲ್ಲೇ ಬ್ಯಾರಿಕೇಡ್‌ ಗಳ ಮೂಲಕ ತಡೆ ಹಿಡಿಯಲಾಯಿತು. ಇದಕ್ಕೆ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಲು ಯತ್ನಿಸಿದಾಗ, ಹತ್ತು ಪ್ರಮುಖ ಹೋರಾಟಗಾರರನ್ನು ನಿಲ್ದಾಣದೊಳಗೆ ಬಿಡಲಾಯಿತು. ಆದರೆ ಮುಂದೆ ರೈಲು ತಡೆಗೆ ಮುಂದಾದಾಗ ರೈಲ್ವೇ ಅಧಿಕಾರಿಗಳು ಹಾಗೂ ರೈಲ್ವೇ ಪೊಲೀಸರು ರೈಲು ತಡೆಗೆ ಅವಕಾಶ ಮಾಡಿಕೊಡಲಿಲ್ಲ
ರೈಲ್ವೇ ಅಧಿಕಾರಿಗಳು, ರೈಲು ತಡೆಗೆ ಅವಕಾಶ ಮಾಡಿ ಮಾಡದೆ ನಮಗೆ ಮನವಿ ಸಲ್ಲಿಸಿ, ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇವೆ. ಮುಂಚೆಯೇ ರೈಲು ತಡೆಗೆ ಮನವಿ ಕೊಡಬೇಕಿತ್ತು. ಹೀಗಾಗಿ ರೈಲು ತಡೆಗೆ ಅವಕಾಶ ಕೊಡುವುದಿಲ್ಲ ಎಂದಾಗ, ಕೆಕೆಸಿಸಿಐ ಪದಾಧಿಕಾರಿಗಳು, ವಾಣಿಜ್ಯೊದ್ಯಮಿಗಳು ಘೋಷಣೆ ಕೂಗಿ ರೈಲ್ವೇ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು, ತಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಮನವಿಯನ್ನು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಪೊಲೀಸರು ರೈಲು ತಡೆ ಯತ್ನ ವಿಫಲಗೊಳಿಸಿದ್ದರ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮೊದಲೇ ಪ್ರತಿಭಟನೆ ನಡೆಸಿ ರೈಲು ತಡೆ ಮಾಡುವುದಾಗಿ ತಿಳಿಸಲಾಗಿದ್ದರೂ ರೈಲು ತಡೆಗೆ ಅವಕಾಶ ಮಾಡಿಕೊಡಲಿಲ್ಲ. ಇದು ಈ ಭಾಗದ ಬಗ್ಗೆ ಹೊಂದಿರುವ ಧೋರಣೆ ಸ್ಪಷ್ಠಪಡಿಸುತ್ತದೆ. ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ದಿನಗಳ ಕೇಂದ್ರ ಕಚೇರಿಗಳಿಗೆ ಹಂತ-ಹಂತವಾಗಿ ಮುತ್ತಿಗೆ ಹಾಕಲಾಗುವುದು. ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. 371ಜೆ ವಿಧಿ ಮಾದರಿಯಲ್ಲಿ ಹೋರಾಟ ರೂಪಿಸಲಾಗುವುದು ಎಂದರು. ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಮಾಜಿ ಅಧ್ಯಕ್ಷ ಉಮಾಕಾಂತ ಪಾಟೀಲ್, ಪದಾಧಿಕಾರಿಗಳಾದ ಶರಣು ಪಪ್ಪಾ, ಅರುಣಕುಮಾರ ಪಾಟೀಲ್, ಸುನೀಲ್ ಕುಲಕರ್ಣಿ, ಮಂಜುನಾಥ ಜೇವರ್ಗಿ ಮುಂತಾದವರು ಮಾತನಾಡಿ ಎಚ್ಚರಿಕೆ ನೀಡಿದರು.
ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಮುಖ ಕಾರ್ಯಗಳಾಗುತ್ತಿಲ್ಲ. ನಿರ್ಲಕ್ಷ್ಯತನದಿಂದ ಯಾವುದೇ ಯೋಜನೆ ಹಾಗೂ ಕೈಗಾರಿಕೆಗಳು ಬರುತ್ತಿಲ್ಲ. ಆದರೆ ಕಳೆದ ನಾಲ್ಕು ದಶಕಗಳ ಬೇಡಿಕೆಯಾಗಿರುವ ಅದರಲ್ಲೂ ಅತ್ಯಂತ ಸಮಂಜಸವಾಗಿರುವ ಕಲಬುರಗಿಯಲ್ಲಿನ ರೈಲ್ವೇ ವಿಭಾಗೀಯ ಕಚೇರಿಯನ್ನಾದರೂ ಸಾಕಾರಗೊಳಿಸುವಂತೆ ಹೋರಾಟಕ್ಕೆ ಧುಮುಕಲಾಗಿದೆ. 2014ರಲ್ಲಿ ಜಮ್ಮು ಹಾಗೂ ಕಲಬುರಗಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆ ನಿಟ್ಟಿನಲ್ಲಿ ಸಂಸತ್ತಿನಲ್ಲಿ ನಡೆದ ವೋಟ್ ಆನ್ ಅಕೌಂಟ್ ಬಜೆಟ್‌ದಲ್ಲಿ ಘೋಷಿಸಲಾಗಿದೆ. ಅದಲ್ಲದೇ ಕಲಬುರಗಿ ರೈಲ್ವೇ ವಿಭಾಗಕ್ಕೆ ವಿಶೇಷ ಕರ್ತವ್ಯಾಧಿಕಾರಿಯನ್ನು ಸಹ ನೇಮಿಸಲಾಗಿತ್ತು. ಪ್ರಮುಖವಾಗಿ ರೈಲ್ವೇ ವಿಭಾಗೀಯ ಕಚೇರಿಗಾಗಿ ಕಲಬುರಗಿಯಲ್ಲಿ 43 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೇ ಮಂತ್ರಾಲಯಕ್ಕೆ ಹಸ್ತಾಂತರಿಸಲಾಗಿದೆ. ಅಶ್ಚರ್ಯಕರ ಸಂಗತಿ ಎನೆಂದರೆ ಜಮ್ಮುವಿನಲ್ಲಿ ಇದೇ ಕಳೆದ ಜನೇವರಿ 6ರಂದು ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆ ಮಾಡಲಾಗಿದೆ. ಆದರೆ ಇದರ ಜತೆಗಿದ್ದ ಕಲಬುರಗಿಯನ್ನು ಕೈ ಬಿಡಲಾಗಿದೆ.ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಆಗಬೇಕೆಂದು 1984ರಲ್ಲೇ ನ್ಯಾಯಮೂರ್ತಿ ಎಚ್.ಸಿ ಸರೀನ್ ಸಮಿತಿ, ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸೇರಿ ಹತ್ತಾರು ಸಮಿತಿಗಳು ವರದಿ ನೀಡಿವೆ. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಇದು ಸಾಕಾರಗೊಳ್ಳುತ್ತಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಕಲಬುರಗಿ ರೈಲ್ವೇ ವಿಭಾಗೀಯ ಕಚೇರಿ ಹೋರಾಟದ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಮುಖರಾದ ಶ್ರೀನಿವಾಸ ಸಿರನೂರಕರ್, ಬಸವರಾಜ ಕುನ್ನೂರ, ಆನಂದ ದಂಡೋತಿ, ಉತ್ತಮ ಬಜಾಜ್, ಸಂತೋಷ ಲಂಗರ್, ಚಂದ್ರಶೇಖರ ಕೋಬಾಳ, ಚೆನ್ನಬಸಯ್ಯ ನಂದಿಕೋಲ, ರವೀಂದ್ರ ಮಾದಮಶೆಟ್ಟಿ, ನಾಗರಾಜ ನಿಗ್ಗುಡಗಿ, ಸಂಗಮೇಶ ಕಲ್ಯಾಣಿ, ಜಗದೀಶ ಕಡಗಂಚಿ, ಶರಣಬಸಪ್ಪ ಮಚ್ಚೆಟ್ಟಿ, ಪ್ರೇಮ ಬಜಾಜ್, ಎಂ.ಎಸ್. ಪಾಟೀಲ್ ನರಿಬೋಳ, ಮಹೇಶ ಪಾಟೀಲ್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಶಾಲಾ-ಕಾಲೇಜ್‌ನ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *