Breaking News

ರಾಯಚೂರು: ಅಕ್ರಮ ಸಂಬಂಧದ ಶಂಕೆ; ಯುವಕನ ಹತ್ಯೆಗೈದಿದ್ದ ಇಬ್ಬರು ಆರೋಪಿಗಳ ಬಂಧನ

ರಾಯಚೂರು: ಜಿಲ್ಲೆಯ ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು 23 ವರ್ಷದ ವಿಜಯಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಪ್ರಸಾದ್ ಮತ್ತು ಮಲ್ಲೇಶ್ ಎಂದು ಹೆಸರಿಸಲಾಗಿದ್ದು, ಮತ್ತೊಬ್ಬ ಆರೋಪಿ ಅಮರೇಶ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಪ್ರಸಾದ್‌ನ ಪತ್ನಿಯೊಂದಿಗೆ ಮೃತ ವಿಜಯಕುಮಾರ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಹಿಂದೆ ವಿಜಯಕುಮಾರ್, ಪ್ರಸಾದ್‌ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಆರೋಪಿಗಳು ವಿಜಯಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಬಳ್ಳಾಪುರ ಗ್ರಾಮದಲ್ಲಿ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ಸ್ಥಳಕ್ಕೆ ವಿಜಯಕುಮಾರ್ ಬಂದಿರುವ ಮಾಹಿತಿ ಆರೋಪಿಗಳಿಗೆ ಸಿಕ್ಕಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಆರೋಪಿಗಳು ವಿಜಯಕುಮಾರ್ ತಲೆಗೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿಜಯಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *